ಬೆಳಗಾವಿ.ಏ.24: ವರನಟ ಡಾ. ರಾಜಕುಮಾರ್ ಅವರು ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದ ಹೆಮ್ಮೆಯಾಗಿದ್ದರು. ಅವರ ನಿಷ್ಠೆ, ಪ್ರಾಮಾಣಿಕತೆ, ಯೋಗಾಭ್ಯಾಸ, ಸರಳತೆಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕರೆ ನೀಡಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ವಾರ್ತಾ ಭವನದಲ್ಲಿ ಗುರುವಾರ (ಏ.24) ಏರ್ಪಡಿಸಲಾಗಿದ್ದ ವರನಟ ಡಾ. ರಾಜಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ ರಾಜಕುಮಾರ್ ಅವರ ಚಲನಚಿತ್ರಗಳನ್ನು ನೋಡುವುದರ ಮೂಲಕ ನಾನು ಕನ್ನಡ ಕಲಿತಿದ್ದೇನೆ.
ರಾಜಕುಮಾರ್ ಅವರು ಕನ್ನಡ ಭಾಷೆ ಬಿಟ್ಟು ಬೇರಾವ ಭಾಷೆಗಳಲ್ಲಿ ನಟಿಸಿದೆ ತಮ್ಮ ಕನ್ನಡ ಅಭಿಮಾನವನ್ನು ತೋರಿದ್ದಾರೆ. ಅವರಂತೆ ನಾವೆಲ್ಲರೂ ನಾಡು-ನುಡಿಯ ಬಗ್ಗೆ ಅಭಿಮಾನವನ್ನು ಹೊಂದಬೇಕು ಎಂದು ಹೇಳಿದರು.
ಜೀವನದಲ್ಲಿ ಶಿಸ್ತನ್ನು ಹೇಗೆ ಪಾಲಿಸಬೇಕು ಎಂಬುದನ್ನು ಡಾ.ರಾಜಕುಮಾರ್ ಅವರ ಕಾಮನಬಿಲ್ಲು ಚಿತ್ರದಿಂದ ನಾವೆಲ್ಲ ಕಲಿಯಬೇಕು. ಡಾ.ರಾಜಕುಮಾರ್ ಅವರು ತಮ್ಮ ಇಳಿ ವಯಸ್ಸಿನಲ್ಲೂ ಕೂಡ ವ್ಯಾಯಾಮ ಮಾಡುವುದರ ಮೂಲಕ ತಮ್ಮ ಶಿಸ್ತು ಬದ್ಧ ಜಿವನವನ್ನು ಸಾಗಿಸಿದರು. ನೂರು ದಿನಗಳ ಕಾಲ ಕಾಡಿನಲ್ಲಿದ್ದರೂ ತಮ್ಮ ಆರೋಗ್ಯ ಮತ್ತು ಜೀವನೋತ್ಸಹವನ್ನು ಕಾಯ್ದುಕೊಂಡಿರುವುದು ಅವರ ಶಿಸ್ತಿನ ಜೀವನಕ್ಕೆ ಸಾಕ್ಷಿಯಾಗಿದೆ.
ಡಾ. ರಾಜಕುಮಾರ ಅವರು ಕನ್ನಡ ನೆಲ,ಜಲ,ಭಾಷೆ ಮೇಲೆ ಹೊಂದಿದಂತಹ ಅಭಿಮಾನದ ಸ್ವಲ್ಪ ಭಾಗವಾದರೂ ನಾವು ಅಳವಡಿಸಿಕೊಳ್ಳಬೇಕು. ಅಲ್ಲದೇ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಕನ್ನಡ ನಾಡು, ನೆಲ,ಜಲ, ಭಾಷೆಗೆ ಕೊಡುಗೆ ನೀಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಡಾ.ರಾಜಕುಮಾರ್ ಅವರ ಶ್ರಾವಣ ಬಂತು ಚಿತ್ರದ “ಇದೇ ರಾಗದಲ್ಲಿ ಇದೇ ತಾಳದಲ್ಲಿ” ಹಾಡನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕನ್ನಡಪ್ರೇಮವನ್ನು ಮೆರೆದರು.
ಡಾ.ರಾಜಕುಮಾರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಶಿರೀಷ್ ಜೋಶಿ ಅವರು, ಸಾರ್ವಜನಿಕ ಕ್ಷೇತ್ರದಲ್ಲಿ ಜನರ ಗಾಢವಾದ ಪ್ರೀತಿ ಗಳಿಸುವುದು ದೊಡ್ಡ ಸಾಧನೆಯೇ ಸರಿ. ಸಂಗೀತ ಕ್ಷೇತ್ರದಲ್ಲಿ ಭಿಮಸೇನ್ ಜೋಶಿ, ಉಸ್ತಾದ ಬಿಸ್ಮಿಲ್ಲಾ ಖಾನ್, ಸಾಹಿತ್ಯದಲ್ಲಿ ದ.ರಾ.ಬೇಂದ್ರೆ, ಅಂತಹ ಮಹಾನ್ ವ್ಯಕ್ತಿಗಳಿಗೆ ಅದೇ ರೀತಿ ಚಿತ್ರರಂಗದಲ್ಲಿ ಡಾ. ರಾಜಕುಮಾರ್ ಅವರಿಗೆ ಅಂತಹ ಗಾಢವಾದ ಪ್ರೀತಿ ಸಿಕ್ಕಿದೆ ಎಂದು ಹೇಳಿದರು.
ಡಾ. ರಾಜಕುಮಾರ್ ಅವರು ಕೇವಲ ಒಬ್ಬ ನಟ ಅಲ್ಲ; ಅವರು ಆದರ್ಶ ವ್ಯಕ್ತಿ ಯಾಗಿ ಕಾಣುತ್ತಾರೆ. ಗೋಕಾಕ ಚಳುವಳಿ ಮುಖಾಂತರ ಕನ್ನಡ ನಾಡಿಗೆ ಅವರು ಕೊಟ್ಟಂತಹ ಕೊಡುಗೆ ದೊಡ್ಡದು. ಮೇರು ಮಟರಾಗಿದ್ದ ಅವರು, ಸಾಮಾಜಿಕ ಸಮಸ್ಯೆಗಳ ನಿವಾರಣೆಯ ಕಥಾಹಂದರದ ಹಲವಾರು ಚಲನಚಿತ್ರಗಳನ್ನು ನಮಗೆ ನೀಡಿದ್ದಾರೆ. ರಾಜಕುಮಾರ್ ಅವರು 77 ವರ್ಷಗಳ ಜೀವನ ಅದ್ಬುತ ಪ್ರಯಾಣವಾಗಿತ್ತು. 1954ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ.
ಒಂದೇ ಚಿತ್ರದಲ್ಲಿ ಅಭಿನಯ ಹಾಗೂ ಗಾಯನ ಎರಡೂ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ದೇಶದ ಏಕೈಕ ನಟ ಡಾ.ರಾಜಕುಮಾರ‌್ ಅವರಾಗಿದ್ದಾರೆ. ಡಾ.ರಾಜಕುಮಾರ್ ಅವರು ನಟಿಸಿದ ಎಷ್ಟೋ ಚಿತ್ರದಿಂದ ಪ್ರೇರೇಪಿತರಾದ ಜನ ಅವರನ್ನು ಅನುಸರಿಸಿ ಸಮಾಜ ಸೇವೆಗೆ ಮುಂದಾಗಿರುವುದು ವಿಶೇಷವಾಗಿದೆ.
ಅವರು ನಟನಾಗಿ ಮಾತ್ರವಲ್ಲದೇ ಒಬ್ಬ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ. ರಾಜಕುಮಾರ್ ಅವರು ಸಿನಿಮಾ ಕ್ಷೇತ್ರದ ಮೂಲಕ ಕನ್ನಡ ನಾಡು ನುಡಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರು ಹೆಚ್ಚಾಗಿ ಭಾಷೆ, ನೆಲ,ಜಲ ಮಹತ್ವದ ಕುರಿತ ಚಿತ್ರಗಳಿಗೆ ಒತ್ತು ನೀಡುತ್ತಿದ್ದರು.
ರಾಜಕುಮಾರ್ ಅವರು ಅನೇಕ ಕಲಾವಿದರು, ಸಹ ನಟರಿಗೂ ವೈಯಕ್ತಿಕವಾಗಿ ಸಹಾಯ ಹಸ್ತವನ್ನು ಚಾಚುತ್ತಿದ್ದರು. ರಾಜಕುಮಾರ್ ಅವರು ಸರಳ ಜೀವನಕ್ಕೆ ಆದ್ಯತೆ ನೀಡುತ್ತಿದ್ದರು. ಜನರ ಹೃದಯದಲ್ಲಿ ನೆಲನಿಂತ ಮಾನವೀಯ ಗುಣವುಳ್ಳ ನಾಯಕ ನಟರಾಗಿದ್ದ ಡಾ. ರಾಜಕುಮಾರ್ ಅವರಿಗೆ ನಟಸಾರ್ವಭೌಮ, ಗಾನ ಗಂಧರ್ವ ಎಂಬ ಬಿರುದುಗಳನ್ನು ಅವರ ಅಭಿಮಾನಿಗಳು ನೀಡಿರುತ್ತಾರೆ ಎಂದು ಶಿರೀಷ್ ಜೋಶಿ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೆಶಕರಾದ ಗುರುನಾಥ ಕಡಬೂರ ಅವರು, ವರನಟ ಡಾ.ರಾಜಕುಮಾರ್ ಅವರು ಸಾಮಾಜಿಕ ಸಂದೇಶ ಸಾರುವಂತಹ ಚಿತ್ರಗಳಲ್ಲಿ ನಟಿಸುವ ಮೂಲಕ ದಾದಾ ಸಾಹೇಬ್ ಫಾಲ್ಕೆ ಯಂತಹ ದೇಶದ ಅತ್ಯುನ್ಯುತ ಅನೇಕ ಪ್ರಶಸ್ತಿಯನ್ನು ಪಡೆದುಕೊಂಡು ಕನ್ನಡಿಗರ ಮನೆ ಮಾತಾಗಿದ್ದಾರೆ ಎಂದರು.
ಕನ್ನಡ ನಾಡು-ನುಡಿಯ ಅಸ್ಮಿತೆಯಾಗಿರುವ ಡಾ.ರಾಜಕುಮಾರ್ ಅವರು, ತಮ್ಮ ಚಲನಚಿತ್ರಗಳ ಮೂಲಕ ಸಮಾಜ ಸುಧಾರಣೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೆಶಕರಾದ ವಿದ್ಯಾವತಿ ಭಜಂತ್ರಿ, ವಾರ್ತಾ ಇಲಾಖೆಯ ಸಮಸ್ತ ಸಿಬ್ಬಂದಿ, ಬೆಳಗಾವಿಯ ಮಾಧ್ಯಮ ಪ್ರತಿನಿಧಿಗಳು, ಡಾ.ರಾಜಕುಮಾರ್ ಅಭಿಮಾನಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತರಾದ ಮಂಜುನಾಥ ಹುಡೇದ ಹಾಗೂ
ಗೋಕಾಕದ ಮಧುರ ಸಂಗೀತ ಗೆಳೆಯರ ಬಳಗದ ರಾಮಚಂದ್ರ ಕಾಕಡೆಯವರು ಪ್ರಸ್ತುತಪಡಿಸಿದ ಡಾ.ರಾಜಕುಮಾರ್ ಅವರ ಜನಪ್ರಿಯ ಗೀತಗಾಯನವು ಸಭಿಕರನ್ನು ಭಾವಪರವಶಗೊಳಿಸಿತು.
******