ಪತ್ರಕರ್ತರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸನ್ಮಾನ ಮುಂದಿನ ಅಧಿವೇಶನ ವೇಳೆಗೆ ಪತ್ರಿಕಾ ಭವನ ಲೋಕಾರ್ಪಣೆ: ಸಚಿವ ಸತೀಶ್ ಜಾರಕಿಹೊಳಿ ಭರವಸೆ

ಪತ್ರಕರ್ತರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸನ್ಮಾನ  ಮುಂದಿನ ಅಧಿವೇಶನ ವೇಳೆಗೆ ಪತ್ರಿಕಾ ಭವನ ಲೋಕಾರ್ಪಣೆ: ಸಚಿವ ಸತೀಶ್ ಜಾರಕಿಹೊಳಿ ಭರವಸೆ

 

ಬೆಳಗಾವಿ, ನ.25: ಬಹುದಿನಗಳ ಬೇಡಿಕೆಯಂತೆ ಬೆಳಗಾವಿ ನಗರದಲ್ಲಿ ಸುಸಜ್ಜಿತ ಪತ್ರಿಕಾಭವನ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 9.9 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಮುಂದಿನ ಚಳಿಗಾಲ ಅಧಿವೇಶನದ ವೇಳೆಗೆ ಭವನನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.

ನಗರದ ವಾರ್ತಾ ಭವನದಲ್ಲಿ ಮಂಗಳವಾರ (ನ.25) ನಡೆದ ಸಮಾರಂಭದಲ್ಲಿ ಪತ್ರಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಪತ್ರಿಕಾಭವನ ನಿರ್ಮಾಣಕ್ಕೆ ದಶಕಗಳಿಂದ ಪ್ರಯತ್ನ ನಡೆದರೂ ಸಾಧ್ಯವಾಗಿರಲಿಲ್ಲ. ಈಗ ನಮ್ಮ ಅಧಿಕಾರದ ಅವಧಿಯಲ್ಲಿ ಪತ್ರಿಕಾ ಭವನ ಮಂಜೂರು ಆಗಿರುವುದು ಸಂತಸದ ವಿಷಯವಾಗಿದೆ ಎಂದರು.

ರಾಯಬಾಗ, ಗೋಕಾಕ ಸೇರಿದಂತೆ ಇತರೆ ತಾಲೂಕುಗಳಲ್ಲಿ ವಕೀಲರ ಸಂಘದ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಲೋಳಸೂರು, ಖಾನಾಪೂರ ಸೇತುವೆ ಸೇರಿದಂತೆ ರಾಜ್ಯದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸೇತುವೆ ನಿರ್ಮಾಣಕ್ಕಾಗಿ ಕ್ರಮ ವಹಿಸಲಾಗಿದೆ.

ರಾಜ್ಯದ ವಿವಿಧೆಡೆ ಸೇತುವೆಗಳ ನಿರ್ಮಾಣಕ್ಕೆ 2 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರವು ಇಲಾಖೆಗೆ ನೀಡಿದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುಂಚೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ರಿಷಿಕೇಶ ಬಹಾದ್ದೂರ್ ದೇಸಾಯಿ, ಬೆಳಗಾವಿ ಜಿಲ್ಲೆ ಬಹಳ ದೊಡ್ಡ ಜಿಲ್ಲೆಯಾಗಿದ್ದು, ಎಲ್ಲ ಪತ್ರಕರ್ತರು ಪತ್ರಿಕಾ ಭವನ ಸದ್ಬಳಕೆ ಮಾಡಿಕೊಂಡು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಭವಿಷ್ಯದಲ್ಲಿ ಬರುವ ತಂತ್ರಜ್ಞಾನ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈಗಾಗಲೇ ಕೃತಕ ಬುದ್ಧಿಮತ್ತೆ( ಆರ್ಟಿಫಿಷಿಯಲ್ ಇಂಟಲಿಜೆನ್ಸ್) ವಿಶ್ವದಾದ್ಯಂತ ಲಗ್ಗೆ ಇಟ್ಟಿದ್ದು, ಪತ್ರಿಕೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ ಇದರ ಬಳಕೆ ಮೂಲಕ ಎಲ್ಲರೂ ತಾಂತ್ರಿಕವಾಗಿ ಅರಿವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಪತ್ರಕರ್ತ ಮೆಹಬೂಬ್ ಮಕಾಂದಾರ್ ಮಾತನಾಡಿ, ಅನೇಕ ಸರ್ಕಾರಗಳು ಬಂದರೂ ಪತ್ರಿಕಾ ಭವನ ನಿರ್ಮಾಣ ಸಾಧ್ಯವಾಗಿರಲಿಲ್ಲ. ಸ್ವಲ್ಪ ತಡವಾದರೂ ಸಹ ಜಿಲ್ಲೆಯ ಪತ್ರಕರ್ತರ ನಿರೀಕ್ಷೆಗೂ ಮೀರಿ ಪತ್ರಿಕಾ ಭವನ ನಿರ್ಮಾಣಕ್ಕೆ ಅನುದಾನ ನೀಡಿರುವುದು ಎಲ್ಲರಿಗೂ ಸಂತಸದ ವಿಷಯವಾಗಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಅವರು, ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಸುಸಜ್ಜಿತವಾದ ಪತ್ರಿಕಾಭವನ ನಿರ್ಮಿಸಬೇಕು ಎಂಬುದು ಮಾಧ್ಯಮ ಪ್ರತಿನಿಧಿಗಳ ಬಹುದಿನಗಳ ಕನಸಾಗಿತ್ತು.
ಈ ನಿಟ್ಟಿನಲ್ಲಿ ಸತತ ಪ್ರಯತ್ನಗಳು ನಡದೇ ಇದ್ದವು. ನಿವೇಶನ ಸಮಸ್ಯೆ, ಅನುದಾನ ಕೊರತೆ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಪತ್ರಿಕಾಭವನ ನಿರ್ಮಾಣ‌ಕ್ಕೆ ಕಾಲ ಕೂಡಿಬಂದಿರಲಿಲ್ಲ. ಇದೀಗ ಕನಸು ನನಸಾಗುತ್ತಿದೆ ಎ‌ಂದರು.
ಎಲ್ಲ ಮಾಧ್ಯಮ ಪ್ರತಿನಿಧಿಗಳ ಒಕ್ಕೊರಲಿನ ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಸತೀಶ್ ಜಾರಕಿಹೊಳಿ ಅವರು, ತಮ್ಮ ಲೋಕೋಪಯೋಗಿ ಇಲಾಖೆಯ ವತಿಯಿಂದ ಬೆಳಗಾವಿ ನಗರದಲ್ಲಿ 9.90 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ “ಪತ್ರಿಕಾಭವನ” ನಿರ್ಮಾಣಕ್ಕೆ ಅನುಮೋದನೆ ನೀಡಿರುತ್ತಾರೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಬೆಳಗಾವಿಯ ಸಮಸ್ತ ಮಾಧ್ಯಮ/ಪತ್ರಿಕಾ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಡಬೂರ ಹೇಳಿದರು.

ಈ ಸಂದರ್ಭದಲ್ಲಿ , ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ್ ಜೋಶಿ ಹಿರಿಯ ಪತ್ರಕರ್ತರಾದ ರಾಜು ಗವಳಿ . ರವಿ ಉಪ್ಪಾರ. ಶ್ರೀಶೈಲ್ ಮಠದ. ಮಂಜುನಾಥ್ ಪಾಟೀಲ್ ಶ್ರೀಕಾಂತ್ ಕುಪ್ಪ ಕಟ್ಟಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಹಿರಿಯ ವರದಿಗಾರರು, ವರದಿಗಾರರು, ಛಾಯಾಗ್ರಾಹಕರು ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
***