ಬೆಳಗಾವಿ ಗ್ರಾಪಂಗಳಿಂದ ₹ 110 ಕೋಟಿ ಆಸ್ತಿ ತೆರಿಗೆ ಸಂಗ್ರಹ- ಜಿಪಂ ಸಿಇಒ ರಾಹುಲ ಶಿಂಧೆ

ಬೆಳಗಾವಿ ಗ್ರಾಪಂಗಳಿಂದ ₹ 110 ಕೋಟಿ ಆಸ್ತಿ ತೆರಿಗೆ ಸಂಗ್ರಹ- ಜಿಪಂ ಸಿಇಒ ರಾಹುಲ ಶಿಂಧೆ

ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇ ಆಸ್ತಿ ಅಭಿಯಾನವನ್ನು ಆರಂಭಿಸಲಾಗಿದೆ.

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 500 ಗ್ರಾಪಂಗಳ ವತಿಯಿಂದ ₹ 110 ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಜಿಪಂ ಸಿಇಒ ರಾಹುಲ ಶಿಂಧೆ ಹೇಳಿದರು,
ನಗರದ ವಾರ್ತಾ ಭವನದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದಲೂ ಆಸ್ತಿ ತೆರಿಗೆ ಸಂಗ್ರಹ ಮಾಡಲಾಗಿದೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಬಾಕಿ ಉಳಿದಿದ್ದ ₹ 1 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಅಲ್ಲದೇ, ಪ್ರತಿ ವರ್ಷ ₹ 45 ಲಕ್ಷ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ ಎಂದರು.
ಗ್ರಾಪಂಗಳಲ್ಲಿ ಬೋರವೆಲ್‌ಗಳಿಗೆ ಅಕ್ರಮ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದು, ನಿಷ್ಪ್ರಯೋಜಕ ಬೋರವೆಲ್‌ಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದು, ಬೀದಿಗಳಲ್ಲಿ ಎಲ್‌ಇಡಿ ವಿದ್ಯುತ್‌ ಬಲ್ಬ್‌ಗಳ ಬಳಕೆ ಮಾಡಿರುವುದು ಸೇರಿದಂತೆ ಮತ್ತಿತರ ಕ್ರಮಗಳಿಂದಾಗಿ ಒಟ್ಟು ₹ 13 ಕೋಟಿ ಉಳಿತಾಯ ಮಾಡಲಾಗಿದೆ ಎಂದರು.
ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೈಗೊಳ್ಳಲಾದೆ. ಪುರುಷ ಮತ್ತು ಮಹಿಳೆಯರಿಗೆ ಸರಿಸಮಾನವಾಗಿ ವೇತನ ಪಾವತಿಸಲಾಗುತ್ತಿದೆ. ಶೇ. 57 ರಷ್ಟು ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಸೃಷ್ಟಿಸಲಾಗುತ್ತಿದೆ. ಚರಂಡಿ, ಶಾಲಾ ಕಂಪೌಂಡ್‌ ನಿರ್ಮಿಸಲಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ನರೇಗಾ ಯೋಜನೆಯಡಿ ಸ್ಥಳೀಯ 1.10 ಕೋಟಿ ಜನತೆಗೆ ಉದ್ಯೋಗ ಸೃಷ್ಟಿಸಲಾಗಿದೆ ಎಂದರು.
ನರೇಗಾ ಯೋಜನೆಯಡಿ ಮೊದಲು ಕೆಲವು ನ್ಯೂನ್ಯತೆ ಇದ್ದವು. ಚೆಕ್‌ ಪೇಮೆಂಟ್‌ ಆಗುತ್ತಿತ್ತು. ಆದರೆ, ಈಗ ಫಲಾನುಭವಿಗಳಿಗೆ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಓಂಬಡ್ಸ್‌ಮನ್‌ನ್ನು ನೇಮಕ ಮಾಡಲಾಗಿದೆ. ನ್ಯೂನ್ಯತೆಗಳನ್ನು ಸರಿಪಡಿಸುವ ಕೆಲಸವೂ ನಡೆಯುತ್ತಿದೆ. ಜನರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಶೌಚಾಲಯ ನಿರ್ಮಿಸಲಾಗಿದೆ. ಬಳಕೆ ಮಾಡುವ ಸಂಬಂಧ ಜಾಗೃತಿ ಮೂಡಿಸಲಾಗಿದೆ. ಬ್ಲಾಕ್‌ ವಾಟರ್‌, ತಾಲೂಕುದಲ್ಲಿ ಘಟಕ ನಿರ್ಮಿಸಲಾಗಿದೆ. ಚಿಕ್ಕೋಡಿಯಲ್ಲಿ ಹಾಗೂ ಅಥಣಿಯಲ್ಲಿ ಎಸ್‌ಟಿಪಿ ಘಟಕ ಸ್ಥಾಪಿಸಸಾಗುತ್ತಿದೆ. ಶೌಚಾಲಯ ನಿರ್ಮಿಸಲು ₹ 20 ಸಾವಿರ ಅನುದಾನ ನೀಡಲಾಗುತ್ತಿದೆ. ಜನರೂ ಕೂಡ ತಮ್ಮ ಸಹಭಾಗಿತ್ವವೂ ಬೇಕಾಗುತ್ತದೆ. ಬಯಲು ಶೌಚ ಮುಕ್ತವಾಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಶೌಚಾಲಯ ಇದ್ದರೂ ಅದನ್ನು ಬಳಕೆ ಮಾಡಲು ಹಿಂದೇಟು ಹಾಕುತ್ತಿರುವ ಬಗ್ಗೆಯೂ ದೂರುಗಳು ಬರುತ್ತಿವೆ. ಈ ಕುರತು ನಾವು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಟ್ಯಾಂಕರ್‌ ಮುಕ್ತ ಜಿಲ್ಲೆ
ಬೇಸಿಗೆ ಕಾಲದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 257 ಗ್ರಾಮಗಳನ್ನು ಕುಡಿಯುವ ನೀರಿನಿಂದ ಬಳಲುತ್ತಿರುವ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಚಿಕ್ಕೋಡಿ ವಿಭಾಗದಲ್ಲಿ 1610 ಗ್ರಾಮಗಳು ಹಾಗೂ ಬೆಳಗಾವಿ ವಿಭಾಗದಲ್ಲಿ 57 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ.
ರಾಜ್ಯದ ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಬೆಳಗಾವಿ ಜಿಲ್ಲೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮುಕ್ತ ಜಿಲ್ಲೆಯಾಗಿದೆ. ಸದ್ಯ ಜಿಲ್ಲೆಯ ಎಲ್ಲಿಯೂ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲ ಗ್ರಾಪಂಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಟ್ಯಾಂಕರ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಕೆಲವು ಅನುಷ್ಠಾನದಲ್ಲಿದ್ದರೆ, ಮತ್ತೆ ಕೆಲವು ಪ್ರಗತಿಯಲ್ಲಿವೆ. ಜಿಲ್ಲೆಯಲ್ಲಿ ಯಾವುದೇ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇ ಆಸ್ತಿ ಅಭಿಯಾನವನ್ನು ಆರಂಭಿಸಲಾಗಿದೆ. ಇ ಆಸ್ತಿಯನ್ನು ಸರಳೀಕರಣಗೊಳಿಸಲಾಗಿದೆ. ಈಗ ಜಿಲ್ಲೆಯಲ್ಲಿ ಶೇ. 20 ರಷ್ಟು ಆಸ್ತಿಗಳಿಗೆ ಇ ಆಸ್ತಿ ಮಾಡಲಾಗಿದೆ ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ, ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ, ಉಪಾಧ್ಯಕ್ಷ ಶ್ರೀಶೈಲ ಮಠದ, ಸಂಜಯ ಸೂರ್ಯವಂಶಿ, ಮಲ್ಲಿಕಾರ್ಜುನ ಮುಗಳಿ ಕಾರ್ಯದರ್ಶಿ ನೌಶಾದ ಬಿಜಾಪುರ, ಸುರೇಶ ನೇರ್ಲಿ, ರಾಜು ಗವಳಿ, ಸಂತೋಷ ಚಿನಗುಡಿ, ಮಂಜುನಾಥ ಕೋಳಿಗುಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಉಪ್ಪಾರ ಕಾರ್ಯಕ್ರಮ ನಿರೂಪಿಸಿದರು.