ನವದೆಹಲಿ, ಮೇ 30: ಭಾರತದ ಅಗ್ರ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಬಂಧಿಸಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ ಎರಡು ದಿನಗಳ ನಂತರ ಆತಂಕಕಾಗಿ ಬೆಳವಣಿಗೆಯೊಂದು ನಡೆಯುತ್ತಿದೆ. ಹರಿದ್ವಾರ ಬಳಿಯ ಗಂಗಾ ನದಿಯಲ್ಲಿ ತಮ್ಮ ಒಲಂಪಿಕ್ಸ್ ಮೆಡಲ್‌ಗಳನ್ನು ಎಸೆಯಲು ಕುಸ್ತಿಪಟುಗಳು ತೀರ್ಮಾನಿಸಿದ್ದಾರೆ.ಬಿಜೆಪಿ ಸಂಸದರೂ ಆಗಿರುವ ಡಬ್ಲ್ಯೂಎಫ್ ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸುಮಾರು ಒಂದೂವರೆ ತಿಂಗಳಿನಿಂದಲೂ ದೇಶದ ಅಗ್ರಮಟ್ಟದ ಕುಸ್ತಿಪಟುಗಳು ರಾಷ್ಟ್ರ ರಾಜಧಾನಿಯಲ್ಲಿ ಹಗಲಿರುಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಪದೇ ಪದೇ ಮಾಡಲಾದ ಮನವಿ ನಿರ್ಲಕ್ಷಿಸಿ ಪ್ರತಿಭಟನಾಕಾರರು ಕಾನೂನು ಉಲ್ಲಂಘಿಸಿದ್ದರಿಂದ ಜಂತರ್ ಮಂತರ್ ನಿಂದ ಅವರನ್ನು ತೆರವುಗೊಳಿಸಲಾಗಿದ್ದು, ಬೇರೆ ಕಡೆ ಪ್ರತಿಭಟನೆ ನಡೆಸಲು ಅವಕಾಶ ಕೊಡುವುದಾಗಿ ದೆಹಲಿ ಪೊಲೀಸರು ನಿನ್ನೆ ಹೇಳಿದ್ದರು. ಆದರೆ, ಗಲಭೆ ಅಥವಾ ಯಾವುದೇ ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪವನ್ನು ಪ್ರತಿಭಟನಾಕಾರರು ನಿರಾಕರಿಸಿದ್ದಾರೆ.
ಆದಾಗ್ಯೂ, ಸರ್ಕಾರ ಮಾತ್ರ ಅವರ ಬೇಡಿಕೆಗಳಿಗೆ ಕಿವಿಗೂಡುತ್ತಿಲ್ಲ. ಇದರಿಂದ ಕೆರಳಿರುವ ಪ್ರತಿಭಟನಾನಿರತ ಕುಸ್ತಿಪಟುಗಳು, ಇಂದು ಸಂಜೆ 6 ಗಂಟೆಗೆ ಹರಿದ್ವಾರದ ಗಂಗಾ ನದಿಯಲ್ಲಿ ತಾವು ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಗೆದ್ದಿರುವ ಪದಕಗಳನ್ನು ಎಸೆಯುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾನುವಾರ ನೂತನ ಸಂಸತ್ ಭವನದತ್ತ ಮೆರವಣಿಗೆಯಲ್ಲಿ ತೆರಳುತ್ತಿದ್ದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಹಲವಾರು ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಅಲ್ಲದೇ ಜಂತರ್ ಮಂತರ್ ನಲ್ಲಿ ಪ್ರತಿಭಟನಾಕಾರರು ಹಾಕಿದ್ದ ಟೆಂಟ್ ಗಳನ್ನು ಕೂಡಾ ತೆರವುಗೊಳಿಸಲಾಗಿದೆ.