This is the title of the web page
This is the title of the web page

ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗೆ ಸವಾಲ್ ಹಾಕಿದ ಟೋಪಣ್ಣವರ ಬೆಳಗಾವಿ

ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗೆ ಸವಾಲ್ ಹಾಕಿದ ಟೋಪಣ್ಣವರ ಬೆಳಗಾವಿ

 

ಬೆಳಗಾವಿಯ ಉತ್ತರ ಮತಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತ ನಡೆಸಿವೆ. ಎರಡೂ ಪಕ್ಷಗಳು ಈ ಕ್ಷೇತ್ರವನ್ನು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ನನ್ನ ಜೊತೆಗೆ ಬಹಿರಂಗ ಚರ್ಚೆಗೆ ಬರುವಂತೆ ಆಮ್ ಆದ್ಮಿ ಉತ್ತರ ಮತಕ್ಷೇತ್ರದ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಸವಾಲ್ ಹಾಕಿದರು.

ಶನಿವಾರ ಚನ್ನಮ್ಮ ವೃತ್ತದಿಂದ ಮನೆ ಮನೆ ಪ್ರಚಾರಕ್ಕೆ ಚಾಲನೆ ನೀಡಿದ ಅವರು ಶನಿವಾರಕೂಟ, ಗಣಪತಿಗಲ್ಲಿ, ಕಂಬಳಿಕೂಟ, ಮಾರುತಿಗಲ್ಲಿ, ರಾಮದೇವಗಲ್ಲಿ, ಸಮಾದೇವಿ ಗಲ್ಲಿ, ಖಡೇಬಜಾರವರೆಗೂ ಮನೆ ಮನೆ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ರಸ್ತೆ ಹಾಗೂ ಚರಂಡಿ ಮಾಡಿರುವುದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಉತ್ತರ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಇಲ್ಲಿನ ಸಮಸ್ಯೆಯ ಬಗ್ಗೆ ಬಗೆಹರಿಸುವ ಇಚ್ಛಾಶಕ್ತಿ ಇದ್ದರೆ ನನ್ನೊಂದಿಗೆ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದರು.

ಕ್ಷೇತ್ರದ ಅಭಿವೃದ್ಧಿ ಯೋಜನೆಯ ಬಗ್ಗೆ ಮಾಹಿತಿ ಇಲ್ಲದ ಅಭ್ಯರ್ಥಿಗಳು ಸ್ಟಾರ್ ಪ್ರಚಾರಕರನ್ನು ಕರೆಸಿ ಮತ ಕೇಳುತ್ತಿದ್ದಾರೆ. ನನಗೆ ಸ್ಟಾರ್ ಪ್ರಚಾರಕರ ಅವಶ್ಯಕತೆ ಇಲ್ಲ. ಜನರ ಮನಸ್ಸನ್ನು ಗೆದ್ದು ಮನೆ, ಮನೆಗೆ ತೆರಳಿ ಆಮ್ ಆದ್ಮಿಗೆ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.

ಉತ್ತರ ಮತಕ್ಷೇತ್ರದ ಹಳೆ ಪ್ರದೇಶಗಳಲ್ಲಿ ನವೀಕರಣ ಮಾಡುವ ಯೋಜನೆ ಸ್ಮಾರ್ಟ್ ಸಿಟಿಯಲ್ಲಿ ಇತ್ತು. ಅದಕ್ಕೆ ಬಂದ ಅನುದಾನವನ್ನು ಬೆಳಗಾವಿಯ ಬಿಜೆಪಿ ಶಾಸಕರು ಚರಂಡಿ ಹಾಗೂ ರಸ್ತೆ ನಿರ್ಮಾಣ ಮಾಡಲು ಬಳಕೆ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ದರ್ಬಾರ್ ಗಲ್ಲಿ, ಬಡಕಲಗಲ್ಲಿ, ಕಸಾಯಿಗಲ್ಲಿ, ಜಾಲಗಾರಗಲ್ಲಿರುವ ಜನರು ಮನುಷ್ಯರೇ ಇಲ್ಲಿ ಅಭಿವೃದ್ಧಿ ಮಾಡಬೇಕಿದ್ದ ಬಿಜೆಪಿಯ ಶಾಸಕರು ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿ ನಗರದ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಇವರಿಬ್ಬರ ನಡುವೆ ಹೊಂದಾಣಿಕೆ ರಾಜಕಾರಣ ಇದೆ. ಈ‌‌ ಹಿಂದೆ ಬೆಳಗಾವಿಯ ದಕ್ಷಿಣದಲ್ಲಿ ಬಿಜೆಪಿ ಹಾಗೂ ಉತ್ತರದಲ್ಲಿ ಕಾಂಗ್ರೆಸ್ ಇದ್ದ ಸಂದರ್ಭದಲ್ಲಿ ಸಾಕಷ್ಟು ಕೋಮು ಗಲಭೆಯಾಗಿವೆ. ಇದರಲ್ಲಿ ಸಾಕಷ್ಟು ಜನ ಅಮಾಯಕರು ಬಲಿಪಶುವಾಗಿದ್ದಾರೆ. ಇಂಥ ವ್ಯವಸ್ಥೆಗೆ ಮತ್ತೆ ಅವಕಾಶ ಕೊಡಬಾರದು. ಬೆಳಗಾವಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು‌ ಹೋಗುವ ಪ್ರಯತ್ನ ಎಲ್ಲರಿಗೂ ಮಾಡಬೇಕು. ಮತದಾರರು ಈ ಬಾರಿ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಜಾತಾ ಪಾಟೀಲ ಮಾತನಾಡಿ, ಉತ್ತರ ಮತಕ್ಷೇತ್ರದ ಜನ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿಕೊಂಡು ಬಂದಿದ್ದರು. ಆದರೆ ಈ ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಈ ಬಾರಿ ಆಮ್ ಆದ್ಮಿ ಪಕ್ಷ ಅಭ್ಯರ್ಥಿಯಾಗಿರುವ ರಾಜಕುಮಾರ ಟೋಪಣ್ಣವರ ಅವರಿಗೆ ಆಶೀರ್ವಾದ ಮಾಡುವ ವಿಶ್ವಾಸ ಇದೆ ಎಂದರು.
ದೆಹಲಿ ಸರಕಾರದಲ್ಲಿ ಮಹಿಳೆಯರಿಗೆ ನೀಡಿದ ಯೋಜನೆಯಾದ ಉಚಿತ ಬಸ್ ಪ್ರಯಾಣ, ಗ್ಯಾಸ್ ಸಿಲಿಂಡರ್ ಉಚಿತ ಕೊಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಅವರಿಗೆ ಗೆಲ್ಲಿಸಿದರೆ ನೀಡಿದ ಭರವಸೆಯನ್ನು ಈಡೇರಿಸುತ್ತಾರೆ ಎಂದರು.
ಕೀರ್ತಿ ಟೋಪಣ್ಣವರ ಮಾತನಾಡಿ, ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವಳಿಕೆಯಿಂದ ಜನ ಬೇಸತ್ತಿದ್ದಾರೆ. ಮನೆ ಮನೆಗೆ ಪ್ರಚಾರ ನಡೆಸಿದ ಸಂದರ್ಭದಲ್ಲಿ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ. ಈ ಬಾರಿ ರಾಜಕುಮಾರ ಟೋಪಣ್ಣವರ ಅವರಿಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂದರು.
ಈ‌ ಸಂದರ್ಭದಲ್ಲಿ ಶಂಕರ ಹೆಗಡೆ, ರವೀಂದ್ರ ಬೆಲ್ಲದ, ಶಿವಾನಂದ ಕಾರಿ, ಜುನೈದ ಪಾಶಾ, ಹರೀಶ ಟೋಪಣ್ಣವರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.