ಬಾಗಲಕೋಟೆ: ಜುಲೈ ೦5 : ಕೇಬಲ್ ಟೆಲಿವಿಷನ್ ನೆಟ್‌ವರ್ಕ ಕಾಯ್ದೆಯನ್ನು ಉಲ್ಲಂಘಿಸಿದಲ್ಲಿ ಕೇಬಲ್ ಆಪರೇಟರ್‌ಗಳ ಉಪಕರಣವನ್ನು ವಶಪಡಿಸಿಕೊಳ್ಳುವ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ಅಧಿಕೃತ ಅಧಿಕಾರಿಗಳು ಹೊಂದಿರುತ್ತಾರೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ಕಾಯ್ದೆಯ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದ ಹಿತಕ್ಕೆ ಭಂಗ ತರುವಂತಹ ಕಾರ್ಯಕ್ರಮ ಪ್ರಸಾರ ಮಾಡುವ ಕೇಬಲ್ ಆಪರೇಟರ್ ಹಾಗೂ ಚಾನೆಲ್ ವಿರುದ್ದ ಕಾಯ್ದೆಯಡಿ ಕ್ರಮವಹಿಸಲಾಗುವುದು. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಮತ್ತು ಜಾಹೀರಾತುಗಳ ಬಗ್ಗೆ ಕೇಬಲ್ ಆಪರೇಟರ್‌ಗಳ ಸೇವೆಯ ನೂನ್ಯತೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಮಟ್ಟದಲ್ಲಿ ದೂರು ಕೋಶಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ದೂರುಗಳನ್ನು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಸ್ಥಳೀಯ ಕೇಬಲ್ ಚಾನೆಲ್‌ಗಳು ಹಾಗೂ ಕೇಬಲ್ ಆಪರೇಟರಗಳು ಇನ್ನು ಮುಂದೆ ತಾವು ಪ್ರಸಾರ ಮಾಡುವ ಎಲ್ಲ ಕಾರ್ಯಕ್ರಮಗಳ ದಾಖಲೆಗಳನ್ನು ಇಟ್ಟುಕೊಳ್ಳತಕ್ಕದ್ದು. ಕೇಳಿದ ತಕ್ಷಣ ದಾಖಲೆ ಹಾಗೂ ದೃಶ್ಯಗಳನ್ನು ಹಾಜರುಪಡಿಸಲು ಬದ್ದರಾಗಿರಬೇಕು. ಯಾವುದೇ ಟೆಲಿವಿಷನ್ ಕಾರ್ಯಕ್ರಮ ಸಾರ್ವಜನಿಕ ವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ಅಥವಾ ಯಾವುದೇ ಸಮುದಾಯಗಳ ಮಧ್ಯೆ ದ್ವೇಷ ಅಥವಾ ನೋವುಂಟು ಮಾಡಿದರೆ, ಈ ಬಗ್ಗೆ ಕ್ರಮಕೈಗೊಳ್ಳಲು ಸಮಿತಿ ಶಿಫಾರಸ್ಸು ಮಾಡಲಿದೆ. ಖಾಸಗಿ ಟಿವಿಗಳ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಕೇಬಲ್ ಆಪರೇಟರಗಳು ಪ್ರಧಾನ ಅಂಚೆ ಕಚೇರಿಯಲ್ಲಿ ನೊಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ನವೀಕರಣಗೊಳ್ಳದ ಕೇಬಲ್ ಆಪರೇಟರ್‌ಗಳ ರದ್ದತಿಗೆ ಕ್ರಮಕೈಗೊಳ್ಳಲಾಗುತ್ತದೆ. ಕೇಬಲ್ ಆಪರೇಟರ್‌ಗಳು ಪ್ರಧಾನ ಅಂಚೆ ಕಚೇರಿಯಲ್ಲಿ ನೊಂದಣಿ ಮಾಡದವರನ್ನು ಅನಧಿಕೃತ ಎಂದು ಪರಿಗಣಿಸಿ ಅವರ ವಿರುದ್ದವು ಸಹ ಕ್ರಮಕೈಗೊಳ್ಳಲಾಗುತ್ತದೆ. ಸಾರ್ವಜನಿಕರಿಂದ ಟ್ರಾಯ್ ಅಡಿಯಲ್ಲಿ ನಿಗದಿಪಡಿಸಿದ ಮಾಸಿಕ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುವಂತಿಲ್ಲವೆAದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ ಸ್ಥಳೀಯ ಕೇಬಲ್ ಚಾನಲ್‌ಗಳಲ್ಲಿ ಶೋಷಣೆಗೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಕರು ಹಾಗೂ ಮಹಿಳೆಯರ ಬಗ್ಗೆ ಮಾಧ್ಯಮಗಳಲ್ಲಿ ಭಾವಚಿತ್ರ ಸಹಿತ ವಿವರವನ್ನು ಹಾಗೂ ದೃಶ್ಯಗಳನ್ನು ಬಿತ್ತರಿಸುವುದು ಆಕ್ಷೇಪಾರ್ಹ. ಇದರಿಂದ ಅವರು ಇನ್ನಷ್ಟು ನೋವು ಅನುಭವಿಸುವಂತಾಗುತ್ತಿದೆ ಹಾಗಾಗಿ ಈ ಬಗ್ಗೆ ಸೂಕ್ಷö್ಮತೆ ಅರಿತು ವರದಿ ಪ್ರಸಾರ ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿಯ ಸದಸ್ಯರಾದ ಅಕ್ಕಮಹಾದೇವಿ ಮಹಿಳಾ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಸುಷ್ಮಾ ಒಡೆಯರ, ರೀಚ್ ಸಂಸ್ಥೆಯ ನಿರ್ದೇಶಕ ಜಿ.ಎನ್.ಸಿಂಹ, ಎಮ್‌ಎಸ್‌ಓಗ¼ ಪ್ರತಿನಿಧಿಗಳಾದ ಮಹೇಂದ್ರ ಎಂ.ಕೆ, ಕಲಬುರ್ಗಿ ಎ.ಎ, ರಬ್ಬಾನಿ ಸಂಕೇಶ್ವರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ ಸ್ವಾಗತಿಸಿ ಕೊನೆಗೆ ವಂದಿಸಿದರು.
ಬಾಕ್ಸ್ . . .
ಯುಟ್ಯೂಬ್ ಚಾನಲ್ ನಿಯಂತ್ರಣಕ್ಕೆ ಪಾಲಸಿ ಅಗತ್ಯ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯುಟ್ಯೂಬ್ ಚಾನಲ್‌ಗಳ ಹಾವಳಿ ಹೆಚ್ಚಾಗಿದ್ದು, ಈ ಚಾನಲ್‌ಗಳಿಗೆ ಸರಕಾರದಿಂದ ಯಾವುದೇ ಮಾನ್ಯತೆ ಇರುವದಿಲ್ಲ. ಕೆಲವೊಂದು ಯುಟ್ಯೂಬ್ ಚಾಲನ್‌ಗಳಿಂದ ಸಮಾಜದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿರುವದರಿಂದ ಅವುಗಳ ನಿಯಂತ್ರಣಕ್ಕೆ ಸರಕಾರದ ಮಟ್ಟದಲ್ಲಿ ಕಟ್ಟುನಿಟ್ಟಿನ ನಿಯಮಾವಳಿ (ಪಾಲಸಿ) ತರುವುದು ಅವಶ್ಯವಾಗಿದೆ. ಈ ಕುರಿತು ಜಿಲ್ಲಾ ಸಮಿತಿ ವತಿಯಿಂದ ಸರಕಾರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಯಿತು.