*ಧಾರವಾಡ (ರಂಭಾಪುರಿ* *ಪೀಠ,ಬಾಳೆಹೊನ್ನೂರು*)- ಆ.೨೭:ಶ್ರಾವಣ ಮಾಸವು ಹಿಂದೂಗಳಿಗೆ, ವಿಶೇಷವಾಗಿ ವೀರಶೈವರಿಗೆ ಪವಿತ್ರ ಮಾಸವಾಗಿದೆ. ಶಿವಪೂಜೆ, ಪುಣ್ಯಕ್ಷೇತ್ರಗಳ ದರ್ಶನದಿಂದ ಜೀವನ ಆನಂದಮಯವಾಗುತ್ತದೆ. ಮತ್ತು ನಿತ್ಯ ಇಷ್ಟಲಿಂಗ ಪೂಜೆ ಮಾಡುವದರಿಂದ ಬರುವ ಅನಿಷ್ಟಗಳು ದೂರವಾಗುತ್ತವೆ ಎಂದು ಶ್ರೀ ಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ರವಿವಾರ ಬೆಳಿಗ್ಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿ ಶಾವಣ ಮಾಸದ ನಿಮಿತ್ತ ಆಯೋಜಿಸಿರುವ ತಮ್ಮ ೩೨ ನೇ ವರ್ಷದ ಇಷ್ಟಲಿಂಗ ಮಹಾಪೂಜೆಯ ೧೧ ದಿನದ ಪೂಜೆ ನೆರವೇರಿಸಿ ಭಕ್ತರಿಗೆ ಆಶಿರ್ವಚನ ನೀಡುತ್ತಿದ್ದರು.
ಏಕಾಂತದಲ್ಲಿ ಮಾಡುತ್ತಿದ್ದ ಇಷ್ಟಲಿಂಗ ಪೂಜೆಯನ್ನು ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ಲೋಕಾಂತಗೊಳಿಸಿದರು. ಭಕ್ತರ ಮಧ್ಯದಲ್ಲಿ ಇಷ್ಟಲಿಂಗ ಮಹಾಪೂಜೆ ನೇರವೇರಿಸಿ ಇಷ್ಟಲಿಂಗ ಪೂಜೆಯನ್ನು ಭಕ್ತರಿಗೆ ತಲುಪಿಸಿದರು. ನಿತ್ಯ ಇಷ್ಟಲಿಂಗ ಪೂಜೆ ಮಾಡುವದರಿಂದ ಬರುವ ಅನಿಷ್ಟಗಳು ದೂರಾಗುತ್ತವೆ. ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ವೀರಶೈವ ಲಿಂಗಾಯತರಾಗಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿ ಹೆಣ್ಣು, ಗಂಡು, ಬಡವ, ಶ್ರೀಮಂತ ಎಂಬ ಭೇದವಿಲ್ಲದೆ, ನಿತ್ಯ ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ವೀರಶೈವ ಲಿಂಗಾಯತ ಧರ್ಮ ಅತ್ಯಂತ ಶ್ರೀಮಂತವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಆಧುನಿಕತೆ, ಇತರ ಮತ ಪ್ರಭಾವಗಳಿಂದ ಇಂದಿನ ಪೀಳಿಗೆ ವೀರಶೈವ ಧರ್ಮ, ಆಚಾರ, ವಿಚಾರಗಳನ್ನು ಮರೆತು ನಡೆಯುತ್ತಿದ್ದಾರೆ. ಈ ಬದಲಾವಣೆ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಶಿವಾಚಾರ್ಯರು ವೀರಮಾಹೇಶ್ವರರು ಸಮಾಜದಲ್ಲಿ ವೀರಶೈವ ಧರ್ಮ, ಸಂಸ್ಕಾರಗಳು ಉಳಿದು ಬೆಳೆದು ಬರಲು ಶ್ರಮಿಸಬೇಕು. ಪರಮಾಚಾರ್ಯರ ಆಜ್ಞೆಯಂತೆ ಆಚಾರವಂತರಾಗಿ, ಸಂಸ್ಕಾರವAತರಾಗಿ ಸಮಾಜಕ್ಕೆ, ಭಕ್ತ ಸಮುದಾಯಕ್ಕೆ ಧರ್ಮ ಮಾರ್ಗದ ಬೋಧನೆ ಮಾಡಬೇಕೆಂದು ಜಗದ್ಗುರುಗಳು ಹೇಳಿದರು. ಕಳೆದ ೩೨ ವರ್ಷಗಳಿಂದ ರಂಭಾಪುರಿ ಪೀಠದಲ್ಲಿ ಪ್ರತಿ ಶ್ರಾವಣ ಮಾಸದಲ್ಲಿ ಕ್ಷೇತ್ರದಲ್ಲಿಯೇ ಇದ್ದು ಇಷ್ಟಲಿಂಗ ಮಹಾಪೂಜೆಯನ್ನು ನೇರವೇರಿಸುತ್ತಾ ಹಿಂದಿನ ಜಗದ್ಗುರುಗಳ ಪರಂಪರೆಯನ್ನು ಪಾಲಿಸಲಾಗುತ್ತಿದೆ. ಶ್ರೀ ಪೀಠದ ಅಭಿವೃದ್ಧಿ ಮತ್ತು ವೀರಶೈವ ಧರ್ಮ, ಪರಮಾಚಾರ್ಯರ ನೀತಿ ಬೋಧನೆಗಳನ್ನು ನಾಡಿನಾದ್ಯಂತ ಬಿಡುವಿಲ್ಲದೆ ಸಂಚರಿಸಿ, ಧರ್ಮ ಸಂವರ್ಧನೆ ಮಾಡಲಾಗುತ್ತಿದೆ ಎಂದು ಜಗದ್ಗುರುಗಳು ತಿಳಿಸಿದರು.
ಶ್ರೀ ಜಗದ್ಗುರು ರಂಭಾಪುರಿ ಪೀಠವನ್ನು ಅಭಿವೃದ್ಧಿ ಪಡಿಸಿ, ಶ್ರೀ ಪೀಠವನ್ನು ಭಕ್ತಿಯ ಪುಣ್ಯಕ್ಷೇತ್ರದ ಜೊತೆಗೆ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುತ್ತಿದೆ. ೫೧ ಅಡಿ ಎತ್ತರದ ಬೃಹತ್ ಶ್ರೀ ರೇಣುಕಾಚಾರ್ಯರ ಬೃಹತ್ ಶಿಲಾ ಮಂಗಲ ಮೂರ್ತಿಯನ್ನು ಸ್ಥಾಪಿಸಲಾಗುತ್ತಿದೆ. ಅಂದಾಜು ೧೨ ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಈಗಾಗಲೇ ಬಿಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ರಾಜ್ಯ ಸರಕಾರದಿಂದ ರೂ.೫ ಕೋಟಿ ಹಣ ಬಿಡುಗಡೆ ಆಗಿದ್ದು, ಉಳಿದ ಅನುದಾನ ನೀಡಲು ಮನವಿ ಸಲ್ಲಿಸಲಾಗಿದ್ದು ವಿಳಂಬವಾಗಿದೆ. ಯೋಜನೆ ಪೂರ್ಣಗೊಳಿಸಲು ಉಳಿದ ಏಳು ಕೋಟಿ ಹಣ ಭಕ್ತರು, ದಾನಿಗಳಿಂದ ಸಂಗ್ರಹಿಸಬೇಕಿದೆ. ಭಕ್ತರ ಸೇವೆಗೆ ಅವಕಾಶ ಮಾಡಿದ್ದು, ಶಿಲಾ ಮಂಗಲಮೂರ್ತಿ ಸ್ಥಾಪನೆಗೆ ರೂ.೧,೧೧,೦೦೦ ಗಳ ದೇಣಿಗೆ ನೀಡಿದರೆ, ಸೇವಾಕರ್ತ ಭಕ್ತರಿಗೆ ಬೆಳ್ಳಿ ತಂಬಿಗೆಯಲ್ಲಿ ಹಾಲು ತುಂಬಿ, ಅವರಿಂದ ರೇಣುಕ ಮೂರ್ತಿಗೆ ಅಭಿಷೇಕ ಮಾಡಿಸಿ, ಅದೇ ಬೆಳ್ಳಿ ತಂಬಿಗೆಯನ್ನು ಆಶಿರ್ವಾದವಾಗಿ ಅವರಿಗೆ ನೀಡಲಾಗುತ್ತದೆ. ಭಕ್ತರು ರೇಣುಕ ಮೂರ್ತಿ ನಿರ್ಮಾಣಕ್ಕೆ ಸೇವೆ ಸಲ್ಲಿಸಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು. ಕಲಬುರಗಿ ಜಿಲ್ಲೆಯ ಮಾದನಹಿಪ್ಪರಗಿ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಇದ್ದರು.
ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಅಧ್ಯಕ್ಷ ಡಾ ಎಸ್.ಎಂ.ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಶೈವ ಜಂಗಮ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಚಿಕ್ಕಮಗಳೂರು ತಾಲೂಕ ವೀರಶೈವ ಸಮಾಜದ ಅಧ್ಯಕ್ಷ ಬಿ.ಎ.ಶಿವಶಂಕರ, ಹಿರೆಕೊಳಲೆ ಉಮೇಶ, ಯಾದಗಿರಿ ನರೇಂದ್ರಗೌಡರು ನಾಂದೇಡ ವಿನಾಯಕ ಪರಿವಾರದವರು ಬೀರೂರು ಕುಮಾರಸ್ವಾಮಿ ಪರಿವಾರದವರು ಸೇರಿದಂತೆ ಬ್ಯಾಡಗಿ, ಹರಿಹರ, ಕಲಘಟಗಿ, ಬೆಳಗಾವಿ, ಹಳಿಯಾಳ, ಹುಬ್ಬಳ್ಳಿ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆಯಲ್ಲಿ ಭಾಗವಹಿಸಿ ದರ್ಶನಾಶೀರ್ವಾದ ಪಡೆದರು.
ಬ್ಯಾಡಗಿಯ ಶ್ರೀಮತಿ ಸುನಂದಾ ರವೀಂದ್ರ, ಮಂಜುನಾಥ ಹಿರೇಮಠ, ಯಾದಗಿರಿಯ ಅನ್ನಪೂರ್ಣಮ್ಮ ಮತ್ತು ಮಕ್ಕಳು ಅನ್ನದಾಸೋಹ ಸೇವೆ ನೆರವೇರಿಸಿದರು.