ಉದ್ಯೋಗದ ಜೊತೆಗೆ ಆರೋಗ್ಯಕ್ಕೆ ಮಹತ್ವ ನೀಡಿ : ರಾಜೇಂದ್ರ ಮೊರಬದ
ಉದ್ಯೋಗ ಖಾತರಿ ಯೋಜನೆಯಡಿ ಕೆಲಸಕ್ಕಾಗಿ ಬರುವ ಕೂಲಿಕಾರರ ಆರೋಗ್ಯ ತಪಾಸಣೆಗೂ ಒತ್ತು ನೀಡಲಾಗುತ್ತಿದೆ ಎಂದು ಸಹಾಯಕ ನಿರ್ದೇಶಕರಾದ ರಾಜೇಂದ್ರ ಮೊರಬದ ಅವರು ಹೇಳಿದರು.
ತಾಲೂಕಿನ ಕಂಗ್ರಾಳಿ ಕೆಚ್ ಗ್ರಾ.ಪಂ.ವ್ಯಾಪ್ತಿಯ ಅಲತಗಾ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರಿಗೆ ನರೇಗಾ ಯೋಜನೆಯಡಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬುಧವಾರ ಮೇ(24) ಮಾತನಾಡಿದರು.
ಕೂಲಿಕಾರರಿಗೆ ಕೆಲಸದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆಯೇ ಹೊರತು, ತಮ್ಮ ಆರೋಗ್ಯದ ಬಗ್ಗೆ ಅರಿವು ಇರುವುದಿಲ್ಲ. ಉದ್ಯೋಗಖಾತರಿ ಯೋಜನೆಯಡಿ ಕೆಲಸ ಮಾಡಲು ಬರುವ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವ ಮೂಲಕ, ಸರಕಾರ ಕೂಲಿಕಾರರ ಬಗ್ಗೆ ಸಾಮಾಜಿಕ ಕಳಕಳಿ ಮನೋಭಾವನೆ ಹೊಂದಬೇಕೆಂಬುದಾಗಿದೆ. ಜಮೀನು ಇದ್ದಲ್ಲಿ, ಕೂಲಿಕಾರರು, ತಮ್ಮ ಜಮೀನಿನಲ್ಲಿ ಕೃಷಿಹೊಂಡ ಕಾಮಗಾರಿ ಅನುಷ್ಠಾನ ಮಾಡಿಕೊಳ್ಳಬಹುದು. ಜತೆಗೆ ಜಾನುವಾರು, ಮೇಕೆಗಳು ಇದ್ದರೆ ದನದದೊಡ್ಡಿ, ಕುರಿದೊಡ್ಡಿ ಸಹ ನಿರ್ಮಿಸಿಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ. ಕೂಲಿಕಾರರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು. ಎಲ್ಲ ಕೂಲಿಕಾರರು ವೈಯಕ್ತಿಕ ಬ್ಯಾಂಕ್ ಖಾತೆ ಹೊಂದಿದ್ದರೆ ಮಾತ್ರ ಸಕಾಲದಲ್ಲಿ ಕೆಲಸ ನೀಡಲು ಮತ್ತು ಕೂಲಿ ಪಾವತಿಸಲು ಸಾಧ್ಯ. ಉದ್ಯೋಗ ಚೀಟಿಯಲ್ಲಿರುವ ಕೂಲಿಕಾರರು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಿಸಬೇಕು ಎಂದರು.
ಐಇಸಿ ಸಂಯೋಜಕ ರಮೇಶ ಮಾದರ ಸ್ವಾಗತಿಸಿದರು, ಕಾರ್ಯದರ್ಶಿ ರಾವಜಿ ಪಗರೆ, ಪ್ರಶಾಂತ ಹೊಸಮನಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ವೈಧ್ಯಕೀಯ ಇದ್ದರು.