ಬೆಳಗಾವಿ: ಚಿಕ್ಕಮಗಳೂರಿನ ವಕೀಲ ಪ್ರೀತಮ್ ಎಂಬವರ ಮೇಲೆ ಪೊಲೀಸರು ನಡೆಸಿದ್ದಾರೆ ಎನ್ನಲಾದ ಮಾರಣಾಂತಿಕ ಹಲ್ಲೆ ಖಂಡಿಸಿ ಬೆಳಗಾವಿಯ ನ್ಯಾಯವಾದಿಗಳು ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪೊಲೀಸ್ ರು ಕ್ಷಮೆಯಾಚಿಸಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬಳಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ವಕೀಲರು ಮಾನವ ಸರಪಳಿ ನಿರ್ಮಿಸಿ 1 ಗಂಟೆಗಳ ಕಾಲ ರಸ್ತೆ ತಡೆದು ನಡೆಸಿ ಪೊಲೀಸರ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿಗಳು ಮಾತನಾಡಿ, ಯುವ ವಕೀಲರ ಮೇಲೆ ನಡೆದ ಹಲ್ಲೆ ಖಂಡನೀಯ, ವಕೀಲರು ಸಮಾಜದ ಅಭಿರಕ್ಷಕರು, ಇವರನ್ನೇ ಪೊಲೀಸ್ ಇಲಾಖೆಯವರು ಹೀಗೆ ನಡೆಸಿಕೊಂಡರೆ, ಇನ್ನು ಸಾಮಾನ್ಯ ಜನರ ಗತಿ ಏನು ಎಂದು ಪ್ರಶ್ನಿಸಿದರು. ಪ್ರಕರಣ ದಾಖಲಾದರೂ ಕೂಡ ಆರೋಪಿಗಳನ್ನು ಬಂಧಿಸದೇ ಇರುವುದು ಸರಿಯಲ್ಲ ಎಂದರು.
ಘಟನೆಯ ಗಂಭೀರತೆ ಅರಿತ ರಾಜ್ಯ ಸರ್ಕಾರ ಆರೋಪಿಗಳನ್ನು ಸೇವೆಯಿಂದ ಅಮಾನತು ಮಾಡಿದೆ. ಆದರೆ ಇನ್ನೂ ಕೂಡ ಅರೋಪಿಗಳ ಬಂಧನವಾಗಿಲ್ಲ, ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ರಾಜ್ಯದ ವಕೀಲರ ಆಗ್ರಹವಾಗಿದೆ ಎಂದರು.
ಶೀಘ್ರವೇ ಸರ್ಕಾರ ವಕೀಲರಿಗಾಗಿ ವಕೀಲರ ರಕ್ಷಣಾ ಕಾಯಿದೆ ಜಾರಿಗೆ ತರಬೇಕು. ಅಲ್ಲದೆ ಚಿಕ್ಕಮಗಳೂರು ನಗರ ಪೊಲೀಸರು ಕ್ಷುಲ್ಲಕ ಕಾರಣಕ್ಕೆ ವಕೀಲನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಕ್ರಮ ಸರಿಯಲ್ಲ. ಆದ್ದರಿಂದ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ರಮೇಶ ದೇಶಪಾಂಡೆ, ವಿನೋದ್ ಪಾಟೀಲ, ಪ್ರಶಾಂತ ಪಾಟೀಲ್, ಉಪಾದ್ಯಕ್ಷ ಸಚೀನ ಶಿವನ್ನವರ, ದನ್ಯಕುಮಾರ ಪಾಟೀಲ್ ಹಾಗೂ ಪೂಜಾ ಸವದತ್ತಿ ಸೇರಿದಂತೆ ಇನ್ನಿತರರು ನ್ಯಾಯವಾದಿಗಳು ಉಪಸ್ಥಿತರಿದ್ದರು