PoliticsBusinessEducationTechnologyEntertainmentSportsHealthFeatureTravelingBeauty TipsRecipes Tips

ಸಕ್ಕರೆ ಕಾರ್ಖಾನೆ ಮಾಲೀಕರ ಸಂಧಾನ ಮಧ್ಯರಾತ್ರಿಯಲ್ಲಿ ಯಶಸ್ವಿ ಇತಿಹಾಸ ನಿರ್ಮಿಸಿದ ಸಿಎಂ*

ಬೆಳಗಾವಿ, ಅ.27:* ಸಿಎಂ ಮಧ್ಯಸ್ಥಿಕೆಯಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಂಧಾನ ಯಶಸ್ವಿಯಾಗಿದ್ದು, ಕೇಂದ್ರ ಸರ್ಕಾರ ಸಕ್ಕರೆ ಕನಿಷ್ಟ ಮಾರಾಟ ಬೆಲೆ ನಿಗದಿ ಮಾಡಿದ ಬಳಿಕ ಅದಕ್ಕೆ ಅನುಗುಣವಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ನೀಡಬೇಕಾಗಿರುವ ದರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಈ ನಿರ್ಧಾರದ ಬಗ್ಗೆ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಇನ್ನೆರಡು ದಿನದಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ.

ಬೆಳಗಾವಿಯ ಸುವರ್ಣ ಸೌಧ ಹಾಗೂ ಸರ್ಕಿಟ್ ಹೌಸ್ ನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜೊತೆಗೆ ಭಾನುವಾರ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಸರಣಿ ಸಭೆ ನಡೆಸಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಸೂತ್ರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

*10 ತಾಸು, ಐದು ಸುತ್ತುಗಳ ಸುದೀರ್ಘ ಸಭೆ*

ಬೆಳಗ್ಗೆ 11 ಗಂಟೆ ಸುಮಾರಿಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಸಕ್ಕರೆ ಮಾಲೀಕರೊಂದಿಗೆ ಸಭೆ ಆರಂಭಿಸಿದ ಸಿಎಂ, ಮಧ್ಯರಾತ್ರಿವರೆಗೂ ಸುಮಾರು 10 ತಾಸುಗಳ, ಐದು ಸುತ್ತಿನ ಸಭೆಗಳನ್ನು ನಡೆಸಿದರು. ಈ ಸಭೆಯಲ್ಲಿ 9 ಮಂತ್ರಿಗಳು ಸೇರಿ 70 ಜನ ಶಾಸಕರು ಸುದೀರ್ಘ ಚರ್ಚೆ ನಡೆಸಿದ್ದಾರೆ. 80 ಕಾರ್ಖಾನೆಗಳ ಪೈಕಿ 79 ಕಾರ್ಖಾನೆ ಮಾಲೀಕರು ಭಾಗಿಯಾಗಿದ್ದು, ರೈತರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಧ್ಯರಾತ್ರಿ ಹೊತ್ತಿಗೆ ಸಂಧಾನ ಸೂತ್ರ ರೂಪಿಸುವಲ್ಲಿ ಯಶಸ್ವಿಯಾದ ಸಿಎಂ ಡಿ ಕೆ ಶಿವಕುಮಾರ್ ಅವರು, ನಂತರ ಮಾಧ್ಯಮದವರ ಜತೆ ಮಾತನಾಡಿದರು.

"ರೈತರು ಕೇಂದ್ರ ಸಚಿವರ ಜತೆ ಚರ್ಚೆ ಮಾಡಿದ್ದು, ರೈತರಿಗೆ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಕಬ್ಬಿನ ಎಂಎಸ್ ಪಿ (ಕನಿಷ್ಠ ಮಾರಾಟ ದರ) ನಿಗದಿ ಬಳಿಕ ಕಾರ್ಖಾನೆಗಳು ರೈತರಿಗೆ ಎಷ್ಟು ದರ ನೀಡಬೇಕು ಎಂದು ತೀರ್ಮಾನಕ್ಕೆ ಬರಲಾಗಿದೆ. ಇದಕ್ಕೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ" ಎಂದು ಶಿವಕುಮಾರ್ ಅವರು ತಿಳಿಸಿದರು. 

"ರೈತರು ಉಳಿಯಬೇಕು, ಕಾರ್ಖಾನೆಯೂ ಉಳಿಯಬೇಕು. ಸರ್ಕಾರಕ್ಕೆ ರೈತರ ಬದುಕು ಮುಖ್ಯ. ರೈತರು ಎರಡು ದಿನ ಕಾಲಾವಕಾಶ ಕೇಳಿದ್ದಾರೆ. ಅವರು ತಮ್ಮಲ್ಲೇ ಚರ್ಚೆ ಮಾಡಿ ನಿರ್ಧಾರಕ್ಕೆ ಬರಲಿದ್ದಾರೆ. ರೈತರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪಂದದ ಹತ್ತಿರಕ್ಕೆ ಬಂದಿದ್ದಾರೆ. ನಾವು ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರದ ಜತೆಗೆ ಅವರೂ ಮಾತನಾಡುತ್ತಾರೆ, ನಾವೂ ಮಾತನಾಡುತ್ತೇವೆ. ಇಂದು ಈ ಹೋರಾಟ ಸುಖಾಂತ್ಯಕ್ಕೆ ಬಂದಿದೆ. ನಾವು ರೈತರಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದು, ಯಾವುದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಬದ್ಧನಾಗಿದ್ದೇನೆ" ಎಂದು ಸ್ಪಷ್ಟಪಡಿಸಿದರು. 

"ಕೇಂದ್ರ ಸಚಿವರು ಕೊಟ್ಟ ಮಾತಿಗೆ ನಡೆಯುತ್ತಾರೆ ಎಂಬ ಭರವಸೆ ರೈತರಿಗಿದೆ. ಅದಕ್ಕೆ ನಮ್ಮ ಬೆಂಬಲವೂ ಇದೆ. ರೈತರಿಲ್ಲದೆ ನಾವಿಲ್ಲ. ನಾವಿಲ್ಲದೆ ರೈತರಿಲ್ಲ. ಸರ್ಕಾರದ ಮಧ್ಯಸ್ಥಿಕೆಯಲ್ಲಿ ಇವರಿಬ್ಬರ ಜತೆ ನಿಲ್ಲಲಿದೆ" ಎಂದರು.

*ರೈತರು, ಸಕ್ಕರೆ ಕಾರ್ಖಾನೆ ಮಾಲೀಕರ ಹಠ, ಪಟ್ಟು ಬಿಡದ ಸಿಎಂ*

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಬಳಿಗೆ ಹೋಗಿ ಸಮಸ್ಯೆ ಬಗೆಹರಿಸಿದ್ದಾರೆ. ಒಂದು ಕಡೆ ತಮ್ಮ ಬೇಡಿಕೆಗಳ ಬಗ್ಗೆ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಹಠ ಹಿಡಿದರೆ, ಸಮಸ್ಯೆಗೆ ಪರಿಹಾರ ಸೂತ್ರ ರಚಿಸಲೇಬೇಕು ಎಂಬ ಪಟ್ಟು ಸಿಎಂ ಶಿವಕುಮಾರ್ ಅವರದ್ದಾಗಿತ್ತು. ಹೀಗಾಗಿ ಸುವರ್ಣ ಸೌಧದಲ್ಲಿ ಸಭೆ ನಡೆಸಿದ ಬಳಿಕ ಸರ್ಕಿಟ್ ಹೌಸ್ ನಲ್ಲಿ ಮತ್ತೆರಡು ಸುತ್ತಿನ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ, ಸಂತೋಷ್ ಲಾಡ್, ಯಶವಂತರಾಯ ಗೌಡ ಪಾಟೀಲ್, ಶಾಸಕ ಎನ್ ಎಚ್ ಕೋನರೆಡ್ಡಿ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಚೂನಪ್ಪ ಪೂಜಾರಿ, ಕುರುಬೂರು ಶಾಂತಕುಮಾರ್, ಚುಕ್ಕಿ ನಂಜುಂಡಸ್ವಾಮಿ, ಸಕ್ಕರೆ ಕಾರ್ಖಾನೆಗಳ ಮಾಲೀಕರಾದ ಸಂಗಮೇಶ್ವರ ನಿರಾಣಿ, ಯೋಗೀಶ್ ಪಾಟೀಲ್, ಚನ್ನರಾಜ್ ಹಟ್ಟಿಹೊಳಿ, ವಿವೇಕ್ ಹೆಬ್ಬಾರ್, ಸಿಎಂ ಆರ್ಥಿಕ ಸಲಹೆಗಾರ ಎಲ್ ಅತೀಕ್, ಅಪರ ಮುಖ್ಯಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಮತ್ತಿತರರು ಉಪಸ್ಥಿತರಿದ್ದರು.

WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.