ಹುಕ್ಕೇರಿ : ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಸರ್ಕಾರಿ ಸಂಸ್ಥೆಗಳ ಖಾಸಗೀಕರಣ, ಮಿತಿಮೀರಿದ ಭ್ರಷ್ಟಾಚಾರ, ಜಿಎಸ್‌ಟಿ ಹೇರಿಕೆ ಸೇರಿದಂತೆ ಮತ್ತಿತರ ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಗೆ ಯಾವ ಪುರುಷಾರ್ಥಕ್ಕೆ ಮತ (ಓಟು) ಹಾಕಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಪ್ರಶ್ನಿಸಿದರು.
ಪಟ್ಟಣದಲ್ಲಿ ಸೋಮವಾರ ನಡೆದ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದ್ದು ಮತ ಕೇಳುವ ನೈತಿಕ ಹಕ್ಕು ಕಳೆದುಕೊಂಡಿದೆ ಎಂದರು.
ಪ್ರಧಾನಿ ಮೋದಿ ನೋಡಿ ಜನ ಓಟು ಹಾಕುತ್ತಾರೆ ಎಂದು ರಾಜ್ಯ ನಾಯಕರು ಹೇಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಸಮಸ್ಯೆಗಳು ತಾಂಡವಾಡುತ್ತಿವೆ. ಮಂತ್ರಿಗಳು ಮತ್ತು ಬಿಜೆಪಿ ನಾಯಕರು ೪೦ ಪರ್ಸೆಂಟ್ ಲಂಚ ಪಡೆಯುವುದರಲ್ಲಿ ನಿರತರಾಗಿದ್ದಾರೆ. ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತುವ ಕುಕೃತ್ಯ ನಡೆದಿದೆ. ಕ್ಷೇತ್ರ ಅಭಿವೃದ್ಧಿಯಿಂದ ಹಿಂದುಳಿದಿದ್ದು ಕತ್ತಿ ಸಹೋದರರ ವಂಶಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಈ ಅನ್ಯಾಯದ ಕುರಿತು ಮತದಾರರಿಗೆ ತಿಳಿಹೇಳುವ ಮೂಲಕ ಬಿಜೆಪಿ ಹಠಾವೋ ಹುಕ್ಕೇರಿ ಬಚಾವೋ ಘೋಷಣೆಯೊಂದಿಗೆ ಕ್ಷೇತ್ರದಲ್ಲಿ ಜನಜಾಗೃತಿ ಮಾಡಲಾಗುವುದು ಎಂದು ಅವರು ಹೇಳಿದರು.
ಎಸ್ಸಿಎಸ್ಟಿ, ಹಿಂದುಳಿದ ವರ್ಗ, ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ದೇಶದ ಸಮಸ್ತ ಜನರ ಬದುಕಿನ ಉಸಿರಾಗಿರುವ ಸಂವಿಧಾನ ಬದಲಾಯಿಸುವ ಹುನ್ನಾರ ನಡೆದಿದೆ. ಶೋಷಿತರು ಮತ್ತು ದಮನಿತರ ಅನೇಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಬಹುತೇಕ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದ್ದು ಆರ್ಥಿಕ, ಸಾಮಾಜಿಕವಾಗಿ ತುಳಿಯುವ ಸಂಚು ನಡೆದಿದೆ ಎಂದು ಅವರು ಆರೋಪಿಸಿದರು.
ವಿವಿಧ ದಲಿತಪರ ಸಂಘಟನೆಗಳ ಸಭೆಯಲ್ಲಿ ಸರಳ, ಸಜ್ಜನಿಕೆಯ ಕಾಂಗ್ರೆಸ್ ಅಭ್ಯರ್ಥಿ ಎ.ಬಿ.ಪಾಟೀಲರನ್ನು ಸರ್ವಾನುಮತದಿಂದ ಬೆಂಬಲಿಸಲು ತೀರ್ಮಾನಿಸಲಾಗಿದೆ. ಹಾಗಾಗಿ ಸ್ವಾಭಿಮಾನದ ಸಂಕೇತವಾಗಿರುವ ಪಾಟೀಲರನ್ನು ದಾಖಲೆಯ ಮತಗಳ ಅಂತರದಿಂದ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲ ಮುಖಂಡರು ಹಳ್ಳಿ ಹಳ್ಳಿಗಳಿಗೆ ತೆರಳಿ ಮತಪ್ರಚಾರ ನಡೆಸಲಿದ್ದಾರೆ. ಈ ಮೂಲಕ ದಲಿತ ವಿರೋಧಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.
ಮುಖಂಡರಾದ ಶ್ರೀಕಾಂತ ತಳವಾರ, ಜಿತೇಂದ್ರ ಮರಡಿ, ಕಲ್ಲಪ್ಪಾ ಕಟ್ಟಿ, ದಿಲೀಪ ಹೊಸಮನಿ, ಕೆಂಪಣ್ಣಾ ಶಿರಹಟ್ಟಿ, ಕೆ.ವೆಂಕಟೇಶ, ಆನಂದ ಕೆಳಗಡೆ, ಪ್ರಕಾಶ ಮೈಲಾಖೆ, ಲಕ್ಷ್ಮಣ ಹೂಲಿ, ಮಂಜುನಾಥ ಪಡದಾರ, ಮಾರುತಿ ಚಿಕ್ಕೋಡಿ, ಪಿಂಟು ಸೂರ್ಯವಂಶಿ, ಮಂಜು ಮರಡಿ, ಮಹೇಶ ಮಾಳಗೆ, ಆನಂದ ಖಾತೇದಾರ, ಬಸವರಾಜ ಹವಾಲ್ದಾರ, ರಾಜು ಮೂಥಾ, ಸುಂದರ ಶಿಂಗೆ, ಸಾಗರ ತಳವಾರ, ಶಂಕರ ಘಂಟೆ, ಬಸವರಾಜ ಕಾಂಬಳೆ, ರೇಖಾ ಬಾಲವ್ವಗೋಳ ಮತ್ತಿತರರು ಉಪಸ್ಥಿತರಿದ್ದರು