This is the title of the web page
This is the title of the web page

ಕಿತ್ತೂರು ಉತ್ಸವ-2023 ವೇದಿಕೆ ಸಜ್ಜು-ಉತ್ಸವಕ್ಕೆ ಕ್ಷಣಗಣನೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಕಿತ್ತೂರು ಉತ್ಸವ-2023 ವೇದಿಕೆ ಸಜ್ಜು-ಉತ್ಸವಕ್ಕೆ ಕ್ಷಣಗಣನೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ, ಅ.22 : ರಾಜ್ಯಮಟ್ಟದ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಮುಖ್ಯ ವೇದಿಕೆ, ದೀಪಾಲಂಕಾರ, ವಸ್ತು ಪ್ರದರ್ಶನ ಮಳಿಗಳು, ಆಸನ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆಗಳು ಅಚ್ಚುಕಟ್ಟಾಗಿ ಪೂರ್ಣಗೊಂಡಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳು ಸಜ್ಜುಗೊಂಡಿವೆ.

ಹೆಚ್ಚು ಜನರು ಸೇರುವ ನಿರೀಕ್ಷೆ ಇರುವುದರಿಂದ ಪಾರ್ಕಿಂಗ್‌ ಸೇರಿದಂತೆ ಯಾವ ತೊಂದರೆಯೂ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಿತ್ತೂರಿನ ಪ್ರಮುಖ ಬೀದಿಗಳಲ್ಲಿ ಹಾಗೂ ಚನ್ನಮ್ಮನ ಕೋಟೆಯ ಸುತ್ತಮುತ್ತ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸೋಮವಾರ (ಅ.23) ಚನಮ್ಮನ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ ವೀರಜ್ಯೋತಿ ಸ್ವಾಗತಿಸಿ, ಜಾನಪದ‌ ಕಲಾವಾಹಿನಿ, ವಸ್ತುಪ್ರದರ್ಶನ ಮಳಿಗೆ ಉದ್ಘಾಟನೆ ಹಾಗೂ ಮತ್ತಿತರ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಸಂಜೆ 7 ಗಂಟೆಗೆ ಉತ್ಸವದ ಉದ್ಘಾಟನೆ ಸಮಾರಂಭ ನಡೆಯಲಿದೆ.

ಉತ್ಸವದ ಪೂರ್ವಸಿದ್ಧತೆಯನ್ನು ಭಾನುವಾರ(ಅ.21) ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಚ.ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಅವರು, ಉತ್ಸವದಲ್ಲಿ ಭಾಗವಹಿಸುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕೋಟೆ ಆವರಣದಲ್ಲಿರುವ ಮುಖ್ಯ ವೇದಿಕೆ, ಆಸನಗಳ ವ್ಯವಸ್ಥೆ, ವಸ್ತುಪ್ರದರ್ಶನ ಮಳಿಗೆ, ದೀಪಾಲಂಕಾರ, ಮಾಧ್ಯಮ‌ಕೇಂದ್ರ, ಪಾರ್ಕಿಂಗ್ ವ್ಯವಸ್ಥೆ ಮತ್ತಿತರ ವ್ಯವಸ್ಥೆಯನ್ನು ಅವರು ಖುದ್ದಾಗಿ ಪರಿಶೀಲಿಸಿದರು.

ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಸೂಕ್ತ ಮೂಲಸೌಕರ್ಯಗಳ ಜತೆಗೆ ಭದ್ರತಾ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
***