This is the title of the web page
This is the title of the web page

ಜನತೆ ನನಗೆ ಆಶೀರ್ವಾದ ಮಾಡಿದರೆ ಬಡವರ ಮನೆಗಳ ಪ್ರಾಧಿಕಾರ ರಚನೆ ಮಾಡುವೆ: ಟೋಪಣ್ಣವರ

ಜನತೆ ನನಗೆ ಆಶೀರ್ವಾದ ಮಾಡಿದರೆ ಬಡವರ ಮನೆಗಳ ಪ್ರಾಧಿಕಾರ ರಚನೆ ಮಾಡುವೆ: ಟೋಪಣ್ಣವರ

 

ಬೆಳಗಾವಿ: ಬೆಳಗಾವಿ ನಗರದಲ್ಲಿ ಸಾಕಷ್ಟು ಜನರಿಗೆ ಸೂರಿಲ್ಲ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಇದ್ದರೂ ಅದು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದೆ. ಬಡವರಿಗೆ ಮತ್ತು ಸಾಮಾನ್ಯ ಜನರಿಗೆ ಮನೆ ಸಿಗುವ ನಿಟ್ಟಿನಲ್ಲಿ ಬಡವರ ಮನೆಗಳ ಪ್ರಾಧಿಕಾರ ನಿರ್ಮಾಣ ಮಾಡಿ ಕಡಿಮೆ ದರದಲ್ಲಿ ಅವರಿಗೆ ಮನೆ ಸಿಗುವ ನಿಟ್ಟಿನಲ್ಲಿ ಹೋರಾಟ ಮಾಡಲಾಗುವುದು ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರದಲ್ಲಿ ಯುವಕರಿಗೆ ಉದ್ಯೋಗಾವಕಾಶ ಇಲ್ಲ. ವಿದ್ಯಾಭ್ಯಾಸ ಕಲಿತು ನೆರೆಯ ಪುಣೆ ಹಾಗೂ ಬೆಂಗಳೂರಿಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ. ಉದ್ಯೋಗ ಸೃಷ್ಠಿಯಾಗಲು ನವೋದ್ಯಮಕ್ಕೆ ಹೆಚ್ಚಿನ ಆಧ್ಯತೆ ನೀಡಿ. ಇಲ್ಲಿಯ ಯುವಕರಿಗೆ ಇಲ್ಲಿಯೇ ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಸೌಲಭ್ಯ ಸಾಕಷ್ಟಿದೆ. ಇದನ್ನು ವ್ಯವಸ್ಥಿತವಾಗಿ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಒಳಚರಂಡಿ ಸಮಸ್ಯೆಯೂ ಉಲ್ಬಣವಾಗಿದೆ. ನನಗೆ ಜನರು ಆಶೀರ್ವಾದ ಮಾಡಿದರೆ ಪ್ರಾಮಾಣಿಕವಾಗಿ ಈ ಸಮಸ್ಯೆಗೆ ಮುಕ್ತಿ ನೀಡುತ್ತೇನೆ ಎಂದರು.
ನಗರ ವೇಗವಾಗಿ ಬೆಳೆಯುತ್ತಿದೆ. ಸಂಚಾರ ಹಾಗೂ ಪಾರ್ಕಿಂಗ್ ಸಮಸ್ಯೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಸಮಸ್ಯೆ ಇದೆ. ಹೊಸ ಬಡಾವಣೆಯಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿದರೆ ಪಾರ್ಕಿಂಗ್ ಸಮಸ್ಯೆ ಬಗೆ ಹರಿಯುತ್ತದೆ. ಮಲ್ಟಿಲೆವಲ್ ಪಾರ್ಕಿಂಗ್ ನಿರ್ಮಾಣ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ. ಅಲ್ಲದೆ, ನಗರದ ಹೊರ ವಲಯದಲ್ಲಿ ಟ್ರಕ್ ಟರ್ಮಿನಲ್ ಮಾಡಿ ಸಂಚಾರ ಸಮಸ್ಯೆ ನಾಂದಿ ಹಾಡಲಾಗುವುದು ಎಂದರು.
ನಾನು ಪ್ರಮುಖವಾಗಿ ಸ್ಥಳೀಯ ಸಮಸ್ಯೆ, ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಹೋದ ಕಡೆಗಳಲ್ಲಿ ಸಾಕಷ್ಟು ಅಭೂತಪೂರ್ವ ಬೆಂಬಲ ಸಿಗುತ್ತಿದೆ. ರಾಜ್ಯಮಟ್ಟದ ಸಮಸ್ಯೆ ತೆಗೆದುಕೊಂಡು ಬೆಳಗಾವಿ ನಗರದಲ್ಲಿ ಉಪಯೋಗವಿಲ್ಲ. ಆದ್ದರಿಂದ ಸ್ಥಳೀಯಮಟ್ಟದಲ್ಲಿ ಮಹಿಳೆಯರು, ಯುವಕರು, ವೃದ್ಧರಿಗಾಗಿ ಯಾವೆಲ್ಲ ಸೌಲಭ್ಯ ನೀಡಬೇಕು ಎಂದು ನನ್ನದೆಯಾದ ಯೋಜನೆ ರೂಪಿಸಿಕೊಂಡಿದ್ದೇನೆ ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನಮಾಡಲಾಗುವುದು ಎಂದರು.
ಸಾಕಷ್ಟು ಯುವಕರಿಗೆ ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿ ಲಕ್ಷಾಂತರ ಜನರನ್ನು ಮುಖವಾಣಿಗೆ ತಂದಿರು ನಾಗನೂರುಮಠದ ಲಿಂ. ಡಾ. ಶಿವಬಸವ ಸ್ವಾಮೀಜಿ ಅವರು ಸಾಕಷ್ಟು ಜನರಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಹೆಸರು ಶಾಶ್ವತವಾಗಿ ಉಳಿಯಬೇಕು. ಮುಂದಿನ ಪೀಳಿಗೆ ಅವರ ಹೆಸರು ಪ್ರಸ್ತಾಪ ಮಾಡಬೇಕು. ಆದ್ದರಿಂದ ರೈಲ್ವೆ ನಿಲ್ದಾಣಕ್ಕೆ ಡಾ. ಶಿವಬಸವ ಸ್ವಾಮೀಜಿ ಅವರ ಹೆಸರು ಇಡಲು ನಿರಂತರವಾಗಿ ಹೋರಾಟ ನಡೆಸುವೆ ಎಂದರು.
ಈ ಸಂದರ್ಭದಲ್ಲಿ ರವೀಂದ್ರ ಬೆಲ್ಲದ ಉಪಸ್ಥಿತರಿದ್ದರು.