ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪ್ರಧಾನಿ ಮೋದಿಯ ಮೆಗಾ ರೋಡ್ ಶೋ ಇಂದು ಕೂಡ ಮುಂದುವರೆದಿದೆ. ನಿನ್ನೆಯ ರೋಡ್‌ಶೋಗೆ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅದರಂತೆ ಇಂದು ಕೂಡ ಸಿಲಿಕಾನ್ ಸಿಟಿಯಲ್ಲಿ ನಮೋ ಮೇನಿಯಾ ಭರ್ಜರಿಯಾಗಿ ಸಾಗುತ್ತಿದೆ. ಮೋದಿ ರೋಡ್ ಶೋನಲ್ಲಿ ಕಂಸಾಳೆ, ಕಲಾತಂಡಗಳು, ಜಾನಪದ ತಂಡಗಳು ಜನರನ್ನು ರಂಜಿಸುತ್ತಿವೆ.
ಪ್ರಧಾನಿಯವರ ರೋಡ್ ಶೋ ಇಂದು ಬೆಳಗ್ಗೆ 10 ಗಂಟೆಗೆ ನ್ಯೂ ತಿಪ್ಪಸಂದ್ರ ರಸ್ತೆಯ ಕೆಂಪೇಗೌಡ ಪ್ರತಿಮೆಯಿಂದ ಆರಂಭವಾಗಿ 11:30ಕ್ಕೆ ಟ್ರಿನಿಟಿ ಸರ್ಕಲ್ ಬಳಿ ಕೊನೆಗೊಂಡಿದೆ. ಇದೇ ವೇಳೆ ಪ್ರಧಾನಿಯವರು ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ರೋಡ್ ಶೋ ಅನ್ನು ಆರಂಭಿಸಿದರು.
ಉದ್ಯಾನ ನಗರಿಯಲ್ಲಿ ಜಿಟಿ ಜಿಟಿ ಮಳೆ ಬರುತ್ತಿದೆ. ಇದರ ನಡುವೆ ಪ್ರಧಾನಿ ಮೋದಿಯವರು ವಿಶೇಷ ವಾಹನದ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಜನರು ಕೂಡ ಮಳೆಯನ್ನು ಲೆಕ್ಕಿಸದೇ ಮೋದಿ ನೋಡಬೇಕು ಎನ್ನುವ ಹಂಬಲದಿಂದ ಕೈಯಲ್ಲಿ ಹೂವುಗಳನ್ನು ಹಿಡಿದುಕೊಂಡು ರಸ್ತೆ ಬದಿ ಸಾಲಿನಲ್ಲಿ ನಿಂತಿದ್ದಾರೆ.