ಬೆಳಗಾವಿ, ಏ.10:ವಿಧಾನಸಭಾ ಚುನಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಎಂ.ಸಿ.ಸಿ. ಸೇರಿದಂತೆ ನೇಮಿಸಲಾಗಿರುವ ವಿವಿಧ ನೋಡಲ್ ಅಧಿಕಾರಿಗಳು ತಮಗೆ ವಹಿಸಲಾಗಿರುವ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಏ.10) ನಡೆದ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದರಿ ನೀತಿ ಸಂಹಿತೆ, ತರಬೇತಿ, ಸಾರಿಗೆ ನಿರ್ವಹಣೆ, ಗಣಕೀಕರಣ, ಸೈಬರ್ ಭದ್ರತೆ, ಸ್ವೀಪ್, ಇವಿಎಂ ನಿರ್ವಹಣೆ, ದೂರುಗಳ ಪರಿಹಾರ ಸೇರಿದಂತೆ ವಿವಿಧ ನೋಡಲ್ ಅಧಿಕಾರಿಗಳನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸಿ ಅಗತ್ಯ ತರಬೇತಿ ಮತ್ತು ಉಪಕರಣಗಳನ್ನು ಕೂಡ ನೀಡಲಾಗಿರುತ್ತದೆ.
ಇದಲ್ಲದೇ ಪ್ರತಿ ತಂಡಕ್ಕೂ ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈ ತಂಡವನ್ನು ಸರಿಯಾಗಿ ಬಳಸಿಕೊಂಡು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು.
ಮತದಾನ ದಿನ ಸಮೀಪಿಸಿದಂತೆ ಪ್ರತಿಯೊಬ್ಬರಿಗೂ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತದಾನ ದಿನಗಳಂದು ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ಉಂಟಾಗದಂತೆ ಪ್ರತಿಯೊಂದು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಆಯಾ ಸಂದರ್ಭಕ್ಕೆ ಬೇಕಾದ ಲೇಖನ, ಮುದ್ರಣ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಸಾರಿಗೆ, ಊಟೋಪಹಾರದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಪರಶುರಾಮ್ ದುಡಗುಂಟಿ, ಲಕ್ಷ್ಮಣ ಬಬಲಿ, ನಿಸಾರ್ ಅಹಮದ್, ರಾಜಶ್ರೀ ಜೈನಾಪುರ, ಶ್ರೀಶೈಲ್ ಕಂಕಣವಾಡಿ, ಪ್ರೀತಂ ನಸಲಾಪುರೆ, ರವಿ ಬಂಗಾರೆಪ್ಪನವರ, ಗುರುನಾಥ ಕಡಬೂರ ಸೇರಿದಂತೆ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ನೋಡಲ್ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.
***