ಬೆಳಗಾವಿ, ಅ.31 : ವಿಧಾನಮಂಡಳದ ಚಳಿಗಾಲ ಅಧಿವೇಶನ ಡಿಸೆಂಬರ್ ನಲ್ಲಿ ನಡೆಯಲಿದ್ದು, ದಿನಾಂಕ ಇನ್ನೂ ನಿಗದಿಪಡಿಸಿರುವುದಿಲ್ಲ. ಆದಾಗ್ಯೂ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನ ಸಿದ್ಧತೆಗೆ ಸಂಬಂಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಅ.31) ನಡೆದ ಅಧಿಕಾರಿಗಳ ಹಾಗೂ ಹೋಟೆಲ್ ಮಾಲೀಕರ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿ ಸಮಿತಿ, ಆಹಾರ ಸಮಿತಿ, ಸಾಮಗ್ರಿಗಳ ಖರೀದಿ ಹಾಗೂ ಮುದ್ರಣ ಸಮಿತಿ, ಸಾರಿಗೆ ಹಾಗೂ ಇಂಧನ ಸಮಿತಿ, ಆರೋಗ್ಯ ಸಮಿತಿ, ಪಾಸ್ ವಿತರಣಾ ಸಮಿತಿ, ದೂರು ನಿರ್ವಹಣಾ ಸಮಿತಿ ಸೇರಿದಂತೆ ಕಳೆದ ಬಾರಿಯಂತೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು.
ಪ್ರತಿಯೊಂದು ಸಮಿತಿಯವರು ಪೂರ್ವಭಾವಿ ಸಭೆಯನ್ನು ನಡೆಸಿ ಸಿದ್ಧತೆಗಳನ್ನು ಆರಂಭಿಸಬೇಕು ಎಂದರು.
ಕೊಠಡಿಗಳನ್ನು ಕಾಯ್ದಿರಿಸಲು ನಿರ್ದೇಶನ:
ಅಧಿವೇಶನಕ್ಕೆ ಆಗಮಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಆದ್ದರಿಂದ ಡಿಸೆಂಬರ್ ಮಾಹೆಯ ಆರಂಭಿಕ ವಾರದಿಂದ ಯಾವುದೇ ಹೋಟೆಲ್ ಗಳು ಸಾರ್ವಜನಿಕರ ಬುಕ್ಕಿಂಗ್ ಗಳನ್ನು ಮಾಡದಿರುವುದು ಸೂಕ್ತ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಡಿಸೆಂಬರ್ 4 ರಿಂದ ಅಧಿವೇಶನ ಆರಂಭಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದ್ದು, ದಿನಾಂಕ ನಿಗದಿಯಾಗಿರುವುದಿಲ್ಲ.
ನವೆಂಬರ್ 6 ರ ಬಳಿಕ ಸ್ಪಷ್ಟಚಿತ್ರಣ ದೊರೆಯಲಿದೆ. ಕೊನೆಗಳಿಗೆಯಲ್ಲಿ ದಿನಾಂಕ ವ್ಯತ್ಯಾಸವಾಗಬಹುದು. ಹೋಟೆಲ್ ಕೊಠಡಿಗಳ ಬುಕ್ಕಿಂಗ್ ಮಾಡದಿರುವುದು ಉತ್ತಮ ಎಂದು ಹೋಟೆಲ್ ಮಾಲೀಕರಿಗೆ ತಿಳಿಸಿದರು.
ಕಳೆದ ಬಾರಿ ಹೊಟೇಲ್ ಕೊಠಡಿಗಳ ಬಿಲ್ ಗಳನ್ನು ಅತ್ಯಂತ ತ್ವರಿತವಾಗಿ ಹಾಗೂ ಸಂಪೂರ್ಣ ಬಿಲ್ ಪಾವತಿಸಲಾಗಿದೆ. ಈ ಬಾರಿ ಕೂಡ ಯಾವುದೇ ವಿಳಂಬವಿಲ್ಲದೇ ಬಿಲ್ ಪಾವತಿಸಲಾಗುವುದು.
ಕೊಠಡಿಗಳ ಸ್ವಚ್ಛತೆ, ಆಹಾರದಲ್ಲಿ ಶುಚಿತ್ಚ ಕಾಪಾಡಿಕೊಳ್ಳಬೇಕು. ಅಧಿವೇಶನಕ್ಕೆ ಆಗಮಿಸುವವರಿಗೆ ಉತ್ತಮ ಅತಿಥ್ಯವನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಅಧಿವೇಶನ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು. ಜಿಲ್ಲಾಡಳಿತದ ನಿರ್ದೇಶನ ಪಾಲಿಸಬೇಕು ಎಂದು ಹೇಳಿದರು.
ಅಧಿವೇಶನ ಸಂದರ್ಭದಲ್ಲಿ ಬಂದೋಬಸ್ತ್, ಸಾರಿಗೆ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಲಾಗುವುದು.
ಅಧಿಕಾರಿ ಹಾಗೂ ಸಿಬ್ಬಂದಿಗೆ ಊಟೋಪಹಾರ, ವಸತಿ ಮತ್ತಿತರ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ನಗರದ ಎಲ್ಲ ಹೋಟೆಲ್ ಹಾಗೂ ವಸತಿಗೃಹಗಳ ಮಾಲೀಕರು, ವ್ಯವಸ್ಥಾಪಕರು ಪಾಲ್ಗೊಂಡಿದ್ದರು.
***