This is the title of the web page
This is the title of the web page

ಅಧಿವೇಶನ ಸಿದ್ಧತೆ: ಅಧಿಕಾರಿಗಳ ಸಮರ್ಪಕ ವ್ಯವಸ್ಥೆಗೆ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಅಧಿವೇಶನ ಸಿದ್ಧತೆ: ಅಧಿಕಾರಿಗಳ  ಸಮರ್ಪಕ ವ್ಯವಸ್ಥೆಗೆ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ, ನ.30 ವಿಧಾನಮಂಡಳದ ಚಳಿಗಾಲ ಅಧಿವೇಶನ ಆರಂಭಕ್ಕೆ ದಿನಗಣನೆ‌ ಆರಂಭಗೊಂಡಿದ್ದು ವಸತಿ, ಊಟೋಪಹಾರ ಹಾಗೂ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಯಾವುದೇ ರೀತಿಯ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ವಿಧಾನಮಂಡಳ ಅಧಿವೇಶನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ(ನ‌.30) ನಡೆದ ಅಧಿಕಾರಿಗಳ ಹಾಗೂ ವಿವಿಧ ಸಮಿತಿಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿಸೆಂಬರ್ 4 ರಿಂದ ವಿಧಾನಮಂಡಳ ಅಧಿವೇಶನ ಆರಂಭಗೊಳ್ಳಲಿದೆ. ವಿಧಾನಸಭೆ ಸಭಾಧ್ಯಕ್ಷರು ಒಂದು ದಿನ ಮುಂಚಿತವಾಗಿಯೇ ಆಗಮಿಸಿ ಸಿದ್ಧತೆಗಳನ್ನು ಪರಿಶೀಲಿಸಲಿದ್ದಾರೆ.
ಪ್ರತಿವರ್ಷದಂತೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಚಿವರು, ಶಾಸಕರಿಗೆ ಊಟೋಪಹಾರದ ವ್ಯವಸ್ಥೆ ಮಾಡಲಾಗುವುದು. ಅದೇ ರೀತಿ ಅಧಿಕಾರಿಗಳು, ಮಾರ್ಷಲ್ ಗಳು, ಮಾಧ್ಯಮ ಪ್ರತಿನಿಧಿಗಳಿಗೆ ವಿಧಾನಸೌಧದ ನೆಲಮಹಡಿಯಲ್ಲಿ ಪ್ರತ್ಯೇಕ ವಾಗಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ವಿಧಾನಸೌಧದ ಹೊರಗಡೆ ವಾಹನ ಚಾಲಕರು, ಅಧಿವೇಶನ ಕರ್ತವ್ಯಕ್ಕೆ ನಿಯೋಜಿತ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾವತಿ‌ ಆಧಾರದ ಕ್ಯಾಂಟೀನ್/ಉಪಹಾರ ಮಳಿಗೆ ಆರಂಭಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಸಮಿತಿಯು ಈ ಬಗ್ಗೆ ಮುಂಚಿತವಾಗಿ ಪರಿಶೀಲಿಸಿ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ವಾಹನಗಳು ಆಗಮಿಸಲಿರುವುದರಿಂದ ವಾಹನ ಚಾಲಕರಿಗೆ ಸೂಕ್ತ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ವಸತಿ ಸ್ಥಳಗಳನ್ನು ಗುರುತಿಸಿ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.
ಅದೇ ರೀತಿ ಭದ್ರತೆಗೆ ಸಾವಿರಾರು ಪೊಲೀಸ್ ಅಧಿಕಾರಿ/ಸಿಬ್ಬಂದಿ ಆಗಮಿಸಲಿದ್ದು, ಅವರಿಗೂ ಕೂಡ ಕಳೆದ ಬಾರಿಯಂತೆ ವಸತಿ ಮತ್ತು ಊಟೋಪಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ, ಹಿರಿಯ ಅಧಿಕಾರಿಗಳಾದ ಗೀತಾ ಕೌಲಗಿ, ಸತೀಶ್ ಕುಮಾರ್, ರಾಜಶ್ರೀ ಜೈನಾಪುರ, ಮಲ್ಲಿಕಾರ್ಜುನ ಕಲಾದಗಿ, ಶ್ರೀಶೈಲ್ ಕಂಕಣವಾಡಿ ಸೇರಿದಂತೆ ವಿವಿಧ ಸಮಿತಿಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು