ಬೆಳಗಾವಿ, ಜು.25: ಹವಾಮಾನ ಇಲಾಖೆಯು ಉಡುಪಿ, ಉತ್ತರ ಕನ್ನಡ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ, ಉತ್ತರ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ(ಫ್ಲ್ಯಾಷ್ ಫ್ಲಡ್) ಮುನ್ಸೂಚನೆ ನೀಡಿರುವುದರಿಂದ ಖಾನಾಪುರ ಸೇರಿದಂತೆ ಜಿಲ್ಲೆಯ ಜನರು ಕೂಡ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಹಠಾತ್ ಪ್ರವಾಹ(ಫ್ಲ್ಯಾಷ್ ಫ್ಲಡ್)ದ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಸೇರಿದಂತೆ ಮೇಲ್ಕಂಡ ಜಿಲ್ಲೆಗಳ ಜಲಪಾತ ವೀಕ್ಷಣೆ ಅಥವಾ ಚಾರಣ ಕೈಗೊಳ್ಳದಿರುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಗುಡ್ಡ ಕುಸಿಯುವ ಸಂಭವ ಇರುತ್ತದೆ. ಆದ್ದರಿಂದ ಪ್ರವಾಸಿಗರು ಮತ್ತು ಗುಡ್ಡದ ಮೇಲೆ ವಾಸಿಸುವ ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ನೆರೆಯ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ ಮುನ್ಸೂಚನೆ ಇರುವುದರಿಂದ ಅಧಿಕಾರಿಗಳು ಖಾನಾಪುರ ಸೇರಿದಂತೆ ಗಡಿಭಾಗದ ತಾಲ್ಲೂಕುಗಳಲ್ಲಿ ನಿರಂತರ ನಿಗಾ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
***