This is the title of the web page
This is the title of the web page

ರಾಹುಲ್ ಗಾಂಧಿ ಪ್ರಕರಣದ ಮೇಲೆ ಅಮೆರಿಕಾ ನಿಗಾ

ರಾಹುಲ್ ಗಾಂಧಿ ಪ್ರಕರಣದ ಮೇಲೆ ಅಮೆರಿಕಾ ನಿಗಾ

 

ವಾಷಿಂಗ್ಟನ್: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನ್ಯಾಯಾಲಯದ ಪ್ರಕರಣವನ್ನು ಅಮೆರಿಕಾ ಗಮನಿಸುತ್ತಿದೆ, ಜೊತೆಯಲ್ಲಿ ಆ ದೇಶದಲ್ಲಿ ಪ್ರಜಾಪ್ರಭುತ್ವದ ತತ್ವಗಳು, ಮಾನವ ಹಕ್ಕುಗಳ ರಕ್ಷಣೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಪಾಲನೆಗಾಗಿ ಭಾರತ ತನ್ನ ಬದ್ಧತೆಯನ್ನು ಮುಂದುವರೆಸುವ ಬಗ್ಗೆ ಸಂವಹನ ನಡೆಸುತ್ತದೆ ಎಂದು ವಾಷಿಂಗ್ಟನ್ ತಿಳಿಸಿದೆ.

2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‍ಗಾಂದಿಗೆ ಸೂರತ್ ನ್ಯಾಯಾಲಯವು ಮಾರ್ಚ್ 23 ರಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಅದಾದ ಒಂದು ದಿನದ ನಂತರ ಪ್ರಕರಣದಲ್ಲಿ ಶಿಕ್ಷೆಯಾದ ದಿನಾಂಕದಿಂದ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ.

ಕಾನೂನು ಪಾಲನೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸುವುದು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ನಾವು ಭಾರತೀಯ ನ್ಯಾಯಾಲಯಗಳಲ್ಲಿ ರಾಹುಲ್‍ಗಾಂಧಿಯವರ ಪ್ರಕರಣವನ್ನು ಗಮನಿಸುತ್ತಿದ್ದೇವೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ಬದ್ಧತೆಯ ಅಭಿಪ್ರಾಯಗಳನ್ನು ಭಾರತ ಸರ್ಕಾರದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪಟೇಲ್, ದ್ವಿಪಕ್ಷೀಯ ಸಂಬಂಧ ಹೊಂದಿರುವ ಯಾವುದೇ ದೇಶದಲ್ಲಿನ ವಿರೋಧ ಪಕ್ಷಗಳ ಸದಸ್ಯರೊಂದಿಗೆ ಅಮೆರಿಕಾ ಸಂಪರ್ಕ ಹೊಂದಿರುವುದು ಸಾಮಾನ್ಯವಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಅನರ್ಹಗೊಳಿಸಿದ ಮೂರು ದಿನಗಳ ನಂತರ ಭಾರತದಲ್ಲಿ ವಿರೋಧ ಪಕ್ಷಗಳು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಪ್ರಜಾಪ್ರಭುತ್ವಕ್ಕಾಗಿ ಕಪ್ಪು ದಿನ ಆಚರಿಸಿವೆ. ಸಂಸತ್ತಿನಲ್ಲಿ ಪ್ರತಿಪಕ್ಷಗಳು ಗದ್ದಲ ಸೃಷ್ಟಿಸಿವೆ.