ಬೆಳಗಾವಿ, ಜೂ.3: ಗೃಹಲಕ್ಷ್ಮೀ, ಯುವನಿಧಿ, ಅನ್ನಭಾಗ್ಯ ಸೇರಿದಂತೆ ಐದೂ “ಗ್ಯಾರಂಟಿ”ಗಳನ್ನು ಜಾರಿಗೊಳಿಸಲಾಗುವುದು ಎಂದು ಸರಕಾರ ಘೋಷಿಸಿದೆ. ಇವುಗಳ ಸಮರ್ಪಕ ಅನುಷ್ಠಾನ, ಫಲಾನುಭವಿಗಳ ಗುರುತಿಸುವಿಕೆ ಹಾಗೂ ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರವಾಹ ನಿರ್ವಹಣೆ ಹಾಗೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜೂ.3) ನಡೆದ ಉಪ ವಿಭಾಗಾಧಿಕಾರಿಗಳು ಹಾಗೂ ತಹಶಿಲ್ದಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐದು ಗ್ಯಾರಂಟಿ ಗಳನ್ನು ಸರಕಾರ ಅನುಷ್ಠಾನಗೊಳಿಸುತ್ತಿದ್ದು, ಕೆಲವು ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಲಾಗಿರುತ್ತದೆ. ಈ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ದಕ್ಷತೆ ಹಾಗೂ ಜಾಗರೂಕತೆಯಿಂದ ಕೆಲಸ ಮಾಡಬೇಕಿದೆ ಎಂದರು.
ಸರಕಾರದ ಮಾರ್ಗಸೂಚಿಯ ಪ್ರಕಾರ ಐದೂ ಗ್ಯಾರಂಟಿಗಳ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಫಲಾನುಭವಿಗಳ ಆಯ್ಜೆ ಸೇರಿದಂತೆ ಪ್ರತಿಯೊಂದು ಕಾರ್ಯವು ಕಟ್ಟುನಿಟ್ಟಾಗಿ ಸರಕಾರದ ಮಾರ್ಗದರ್ಶನ ಪ್ರಕಾರ ಕೆಲಸ ಮಾಡಬೇಕಿದೆ.
ಕಾಳಜಿ ಕೇಂದ್ರ-ಅಗತ್ಯ ಸಿದ್ಧತೆಗೆ ಸೂಚನೆ:
ಸಂಭವನೀಯ ಪ್ರವಾಹ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಆಗದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ಒಂದು ವೇಳೆ ಎಲ್ಲಿಯಾದರೂ ಪ್ರಕೃತಿ ವಿಕೋಪದಿಂದ ಜನರು ಅಥವಾ ಜಾನುವಾರುಗಳ ಜೀವಹಾನಿ ವರದಿಯಾದರೆ ಅಂತಹ ಸಂದರ್ಭಗಳಲ್ಲಿ 24 ಗಂಟೆಯ ಒಳಗಾಗಿ ಪರಿಹಾರವನ್ನು ವಿತರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಎಲ್ಲ ಉಪ ವಿಭಾಗಾಧಿಕಾರಿ ಹಾಗೂ ತಹಶಿಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.
ಪ್ರವಾಹ ಸಂದರ್ಭದಲ್ಲಿ ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಹಾನಿ ಉಂಟಾಗಿರುತ್ತದೆ. ಆದ್ದರಿಂದ ಹಾನಿಯಾದ ದಾಖಲೆಗಳನ್ನು ಒದಗಿಸಬೇಕಿರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಕೂಡಲೇ ಛಾಯಾಚಿತ್ರ- ವಿಡಿಯೋ ಚಿತ್ರೀಕರಣ ಮಾಡಬೇಕು.
ಪ್ರವಾಹ ಪರಿಸ್ಥಿತಿ ಎದುರಾದಾಗ ಅಗತ್ಯವಿರುವ ಕಡೆಗಳಲ್ಲಿ ಜನರನ್ನು ಕೂಡಲೇ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಕಾಳಜಿ ಕೇಂದ್ರದಲ್ಲಿ ಉತ್ತಮ ಊಟೋಪಹಾರದ ವ್ಯವಸ್ಥ ಕಲ್ಪಿಸಬೇಕು.
ಪ್ರವಾಹ ಸಂಭವಿರುವ ಸ್ಥಳಗಳಲ್ಲಿ ಗುರುತಿಸಲಾಗಿರುವ ಕಾಳಜಿ ಕೇಂದ್ರಗಳನ್ನು ಮುಂಚಿತವಾಗಿಯೇ ಎಲ್ಲ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ಪ್ರತಿಯೊಂದನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಎರಡನೇ ಅವಧಿಗೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿಗೆ ತಾಲ್ಲೂಕುವಾರು ಸಭೆ:
ಸರಕಾರದ ಮಾರ್ಗಸೂಚಿ ಪ್ರಕಾರ ಎರಡನೇ ಅವಧಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಜೂನ್ 9 ರಿಂದ 21ರವರೆಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಆಯಾ ತಾಲ್ಲೂಕುಗಳಲ್ಲಿ ಪ್ರತ್ಯೇಕವಾಗಿ ಸಭೆಯನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ.
ಅದೇ ದಿನಗಳಂದು ಆಯಾ ತಾಲ್ಲೂಕಿಗೆ ಸಂಬಂಧಿಸಿದಂತೆ ಪ್ರವಾಹ ನಿರ್ವಹಣೆ ಹಾಗೂ ಗ್ಯಾರಂಟಿ ಅನುಷ್ಠಾನ, ಸಾರ್ವಜನಿಕ ಅಹವಾಲುಗಳ ಕುರಿತು
ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಕೂಡ ಪ್ರತ್ಯೇಕವಾಗಿ ನಡೆಸಲಾಗುವುದು.
ಇದೇ ಸಂದರ್ಭದಲ್ಲಿ ಸಾರ್ವಜನಿಕರ ಭೇಟಿ ಹಾಗೂ ಅಹವಾಲು ಆಲಿಕೆಗೂ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳೆಹಾನಿ- ಪರಿಹಾರ ಪೋರ್ಟಲ್ ನಲ್ಲಿ ಮಾಹಿತಿ ಭರ್ತಿ:
ಜಿಲ್ಲೆಯಲ್ಲಿ ಇತ್ತೀಚಿನ ಮಳೆಯಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಹಾನಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ನಡೆಸಿ ಹಾನಿಯ ಕುರಿತು ಪರಿಹಾರ ಪೋರ್ಟಲ್ ನಲ್ಲಿ ಮಾಹಿತಿಯನ್ನು ದಾಖಲಿಸಲಾಗಿದೆ.
ಬೇಸಿಗೆ ತಾಪ ಹೆಚ್ಚಾಗಿರುವುದರಿಂದ ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆಗಳು ಕಂಡುಬರುತ್ತವೆ. ಈ ಕುರಿತು ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಹಾಗೂ ಕೊಳವೆ ಬಾವಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇದೇ ರೀತಿ ಹಾವು ಕಡಿತದಿಂದ ಉಂಟಾದ ಸಾವುಗಳು ಸೇರಿದಂತೆ ಯಾವುದೇ ಬಗೆಯ ಪರಿಹಾರ ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಿರ್ದೇಶನ ನೀಡಿದರು.
ಬಹುದಿನಗಳಿಂದ ಬಾಕಿ ಉಳಿದಿರುವ ಕೆಜೆಪಿ, ದರಖಾಸ್ತು ಪ್ರಕರಣಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು. ತಹಶೀಲ್ದಾರರು, ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಸರ್ವೇಯರ್ ಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಸಭೆಯನ್ನು ನಡೆಸಬೇಕು.
ಸಾರ್ವಜನಿಕರ ಯಾವುದೇ ಕೆಲಸಗಳು ಬಾಕಿ ಉಳಿಯದಂತೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ವಿತರಣೆಗೆ ಬಾಕಿ ಇರುವ ಹಕ್ಕುಪತ್ರಗಳನ್ನು ಕೂಡಲೇ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ್ ಗಿತ್ತೆ, ಬೆಳಗಾವಿ ಉಪ ವಿಭಾಗಾಧಿಕಾರಿ ಬಲರಾಮ್ ಚವಾಣ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಸೇರಿದಂತೆ ಜಿಲ್ಲೆಯ ಎಲ್ಲ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.
****