This is the title of the web page
This is the title of the web page

ಒಳಿತು ಮಾಡುವ ಮನುಜನಿಗೆ ಸೋಲಿಲ್ಲ: ಎಂ.ಜಿ.ಹಿರೇಮಠ

ಒಳಿತು ಮಾಡುವ ಮನುಜನಿಗೆ ಸೋಲಿಲ್ಲ: ಎಂ.ಜಿ.ಹಿರೇಮಠ

 

ಬೆಳಗಾವಿ, ಮೇ 31: ಸರಕಾರಿ ಸೇವೆ ಎಂಬುದು ನಮಗೆ ಸಿಕ್ಕ ದೇವರ ಆಶೀರ್ವಾದ ಇದ್ದಂತೆ. ಹುದ್ದೆ ಯಾವುದೇ ಇರಲಿ ಪ್ರಾಮಾಣಿಕತೆ, ಸಕಾರಾತ್ಮಕ ಮನೋಭಾವ ಹಾಗೂ ಜನರಿಗೆ ಒಳಿತು ಮಾಡಬೇಕು ಎಂಬ ಆಶಯವಿದ್ದರೆ ಯಶಸ್ಸು, ಕೀರ್ತಿ ಹಾಗೂ ಸಂತೃಪ್ತ ಭಾವನೆ ನಮ್ಮ ಜತೆಗಿರುತ್ತದೆ ಎಂದು ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಮೇ 31) ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು‌ ಮಾತನಾಡಿದರು.

ಯಾವುದೇ ಕೆಲಸ ಇರಲಿ; ನಮ್ಮ ಸಾಧನೆಯು ಉನ್ನತ ಹುದ್ದೆಗೆ ಅವಕಾಶ ಕಲ್ಪಿಸಿಕೊಡುತ್ತದೆ ಎಂಬುದಕ್ಕೆ ನಾನೇ ಉದಾಹರಣೆ ಎಂದರು.
ತವರು ಜಿಲ್ಲೆಯಲ್ಲಿಯೇ ನಿವೃತ್ತಿಯಾಗಬೇಕು ಎಂಬ ಇಚ್ಛೆಗೆ ಸರಕಾರ ಕೂಡ ಅನುವು ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಭೌತಶಾಸ್ತ್ರ ಹಾಗೂ ಗಣಿತ ವಿಷಯದಲ್ಲಿ ಪರಿಣಿತನಾಗಿದ್ದ ನನಗೆ ಉಪನ್ಯಾಸ ವೃತ್ತಿಯಲ್ಲಿದ್ದಾಗ ಸರಕಾರಿ ಸೇವೆ ಕೈಬೀಸಿ ಕರೆಯಿತು.
ಹುಬ್ಬಳ್ಳಿ-ಧಾರವಾಡದಲ್ಲಿ ಜಾರಿಗೆ ತಂದ ಬಿ.ಆರ್.ಟಿ.ಎಸ್. ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂತೃಪ್ತಿ ಇದೆ.

ಗದಗ ಜಿಲ್ಲೆಯ 34 ಎಕರೆ ಜಾಗೆಯಲ್ಲಿನ ಅಕ್ರಮವನ್ನು ತೆರವುಗೊಳಿಸಿ ಸರಕಾರದ ಸುಪರ್ದಿಗೆ ಹಿಂದಿರುಗಿಸಿದ ಕೆಲಸವನ್ನು ಮೆಚ್ಚಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿನಂದನ ಪತ್ರ ನೀಡಿದ್ದನ್ನು ಮೆಲುಕುಹಾಕಿದರು.

.ಜಿಲ್ಲಾಧಿಕಾರಿಯಾಗಿರುವರು ನಾಯಕತ್ವ ವಹಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ದೊರಕಿಸಲು ಸಾಧ್ಯ. ಪ್ರವಾಹಪೀಡಿತ ಚಿಕ್ಕೋಡಿ, ಕಾಗವಾಡ ಮತ್ತಿತರ ತಾಲ್ಲೂಕುಗಳಲ್ಲಿ ಮುಖ್ಯಮಂತ್ರಿಗಳ ನೆರವಿನೊಂದಿಗೆ 183 ಕೋಟಿ ಮೊತ್ತದ ಅನುದಾನ ಹಾಗೂ 8 ಸಾವಿರ ಮನೆಗಳನ್ನು ಒದಗಿಸಿರುವುದನ್ನು ನೆನಪಿಸಿಕೊಂಡರು.

ಕೋವಿಡ್ ಲಸಿಕೆ ಸಂದರ್ಭದಲ್ಲಿ ಒಂದೇ ದಿನದಲ್ಲಿ ಮೂರು ಲಕ್ಷ ಲಸಿಕೆಯನ್ನು ಹಾಕುವ ಮೂಲಕ ಇಡೀ ದೇಶಕ್ಕೆ ದ್ವೀತಿಯ ಸ್ಥಾನ ಗಳಿಸಿರುವುದನ್ನು ಸ್ನರಿಸಿದ ಅವರು, ಇಂತಹ ಅವಕಾಶ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಲಭಿಸುತ್ತದೆ ಎಂದರು.

ಕೆಲವೊಮ್ಮೆ ನಿಯಮಾವಳಿ ಮೀರಿ ಜನರಿಗೆ ಸಹಾಯ ಮಾಡಲು ಮುಂದಾಗಬೇಕು ಅಂದಾಗ ಮಾತ್ರ ಜನರ ಪ್ರೀತಿ ಗಳಿಸಲು ಸಾಧ್ಯವಾಗುತ್ತದೆ. ಎಲ್ಲ ಸಹೋದ್ಯೋಗಿಗಳ ಸಹಕಾರದಿಂದ ಅತ್ಯುತ್ತಮ ಕೆಲಸ ಮಾಡುವುದು ನನಗೆ ಸಾಧ್ಯವಾಗಿದೆ ಎಂದು ಎಂ.ಜಿ.ಹಿರೇಮಠ ಹೇಳಿದರು.

ಬೆಳಗಾವಿಯ ಮಣ್ಣಿನ ಮಗನಾಗಿರುವ ಎಂ.ಜಿ.ಹಿರೇಮಠ ಅವರು ಜಿಲ್ಲಾಧಿಕಾರಿಯಾಗಿ ಪ್ರಾದೇಶಿಕ ಆಯುಕ್ತರಾಗಿ ಇಲ್ಲಿನ ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಸದಾ ಹಸನ್ಮುಖಿಯಾಗಿರುವಂತಹ ಅಪರೂಪದ ವ್ಯಕ್ತಿವು ಎಲ್ಲ ಅಧಿಕಾರಿಗಳಿಗೆ ಮಾದರಿಯಾಗಿದೆ.
ಪ್ರವಾಹ ಮತ್ತು ಕೋವಿಡ್ ಸಂದರ್ಭದಲ್ಲಿ ಅತ್ಯಂತ ಸಮರ್ಥವಾಗಿ ಕೆಲಸ ಮಾಡುವ ಮೂಲಕ ಜಿಲ್ಲೆಯ ಜನರಿಗೆ ಮತ್ತು ಸರಕಾರಕ್ಕೆ ಕೀರ್ತಿಯನ್ನು ತಂದಿದ್ದಾರೆ ಎಂದು ಹೇಳಿದರು.
ಉಪನ್ಯಾಸಕ ವೃತ್ತಿಯಿಂದ ಹಿಡಿದು ಪ್ರಾದೇಶಿಕ ಆಯುಕ್ತರವರೆಗಿನ ಅವಧಿಯಲ್ಲಿ ಹಿರೇಮಠ ಅವರ ಸಾಧನೆಯನ್ನು ಮೆಲುಕು ಹಾಕಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ವಿಜಯಪುರ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮನವರ, 36 ವರ್ಷಗಳ ಸುದೀರ್ಘ ಸೇವೆಯ ಬಳಿಕ ಸೇವಾಸಂತೃಪ್ತಿಯಿಂದ ತವರು ಜಿಲ್ಲೆಯಲ್ಲಿ ನಿವೃತ್ತರಾಗುತ್ತಿರುವುದು ಸಂತಸದಾಯಕವಾಗಿದೆ ಎಂದರು.
ಸರಕಾರಿ ಸೇವಾ ಬದುಕು ಮಹಾಜೀವನ ಇದ್ದಂತೆ. ಕಾಯಕವೇ ಕೈಲಾಸ ಎಂದು ಬದುಕಿದ ಅವರ ಸೇವೆ ಸ್ಮರಣೀಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಮಖಂಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಮಾತನಾಡಿ, ಶಾಂತಸ್ವಭಾವದ ಎಂ.ಜಿ.ಹಿರೇಮಠ ಅವರು ಕಾಯಕನಿಷ್ಠೆ ಮತ್ತು ಸೇವಾ ಮನೋಭಾವವನ್ನು ಕಾಪಿಟ್ಟುಕೊಂಡು ಬರುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿರುತ್ತಾರೆ ಎಂದು ಸ್ಮರಿಸಿದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರೇಗೌಡ ಅವರು, ವಿಶ್ವವಿದ್ಯಾಲಯಕ್ಕೆ ಸ್ವಂತ ಜಾಗೆ ಒದಗಿಸುವ ಮೂಲಕ ವಿಶ್ವವಿದ್ಯಾಲಯದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅತ್ಯಂತ ಯಶಸ್ವಿ ಆಡಳಿತಗಾರರು ಮಾತ್ರವಲ್ಲ; ಹಿರೇಮಠರು ಹೃದಯವಂತರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಸಯೀದಾ ಆಫ್ರಿನ್ ಬಾನು ಬಳ್ಳಾರಿ ಅವರು, ಕೋವಿಡ್ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಹಿರೇಮಠ ಅವರು ನೀಡಿದ ಮಾರ್ಗದರ್ಶನ ಹಾಗೂ ಬಿಮ್ಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿರುವುದನ್ನು ನೆನಪಿಸಿಕೊಂಡರು.

ದಲಿತ ಸಂಘಗಳ ಮುಖಂಡರಾದ ಮಲ್ಲೇಶ್ ಚೌಗಲೆ, ಕೋವಿಡ್ ಸಂದರ್ಭದಲ್ಲಿ ಸಾಮಾನ್ಯ ಕುಟುಂಬಗಳಿಗೆ ಆಹಾರಧಾನ್ಯಗಳನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆದರು ಎಂದು ಶ್ಲಾಘಿಸಿದರು.
ಸೇವೆಯ ಜತೆಗೆ ಹಿರೇಮಠ ಅವರ ಅಂತಃಕರಣದ ವ್ಯಕ್ತಿತ್ವವನ್ನು ಎಲ್ಲರೂ ರೂಢಿಸಿಕೊಳ್ಳಬೇಕಿದೆ. ಅಧಿಕಾರ ಶಾಶ್ವತವಲ್ಲ; ಆ ಅವಧಿಯಲ್ಲಿ ಗಳಿಸಿದ ಜನರ ಪ್ರೀತಿ ದೊಡ್ಡದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿ ನಿಯೋಜನೆಗೊಂಡಿರುವ ಬಾಗಲಕೋಟೆ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಲಸ ಅಥವಾ ಹುದ್ದೆ ಯಾವುದೇ ಇರಲಿ ಶ್ರದ್ಧೆಯಿಂದ ಮಾಡಿದ ಪ್ರತಿಯೊಂದು ಕೆಲಸವು ಮಹತ್ವದ್ದಾಗಿದೆ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಅವರು ಮಾತನಾಡಿ, ಅನೇಕ ಸಂದರ್ಭಗಳಲ್ಲಿ ಅವರ ಮಾರ್ಗದರ್ಶನ ಪಡೆದುಕೊಂಡಿರುವುದನ್ನು ಸ್ಮರಿಸಿದರು.
ಪ್ರವಾಹ ಮತ್ತು ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಜನರಿಗೆ ಅತ್ಯಂತ ಪ್ರಯೋಜನಕಾರಿಯಾಗಿವೆ ಎಂದರು.

ಸಮಾರಂಭದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಧಾರವಾಡ ಉಪ ವಿಭಾಗಾಧಿಕಾರಿ ಅಶೋಕ ತೇಲಿ ಅವರು, ಎಲ್ಲ ಕಿರಿಯ ಅಧಿಕಾರಿಗಳಿಗೆ ಹಿರೇಮಠ ಅವರು ಮಾದರಿಯಾಗಿದ್ದಾರೆ. ಹಿರಿಯ ಅಧಿಕಾರಿಯಲ್ಲ; ನಾಯಕರಂತೆ ಮುಂಚೂಣಿಯಲ್ಲಿದ್ದುಕೊಂಡು ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ್ ಗಿತ್ತೆ ಮಾತನಾಡಿದರು.

ಎಂ.ಜಿ.ಹಿರೇಮಠ ದಂಪತಿಗೆ ಸನ್ಮಾನ:

ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲಾಡಳಿತದ ಪರವಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಎಂ.ಜಿ.ಹಿರೇಮಠ ದಂಪತಿಯನ್ನು ಅವರನ್ನು ಸನ್ಮಾನಿಸಿದರು.

ತನುಜಾ‌ ಹಿರೇಮಠ,_ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ್ ಗಿತ್ತೆ ಮತ್ತಿತರರು ಉಪಸ್ಥಿತರಿದ್ದರು.
ಅಪರ ಪ್ರಾದೇಶಿಕ ಆಯುಕ್ತರಾದ ನಜ್ಮಾ ಪೀರಜಾದೆ ಅವರು ಸ್ವಾಗತಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು.

ಸಮಾರಂಭದ ಕೊನೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಹಿರೇಮಠ ಅವರ ಸ್ನೇಹಿತರು, ಹಿತೈಷಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಎಂ.ಜಿ.ಹಿರೇಮಠ ದಂಪತಿಗೆ ಸನ್ಮಾನಿಸಿ, ಹೂಗುಚ್ಛ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು.
****