ಬೆಳಗಾವಿ, ಜು 4: ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಕೆರೆ-ಕಟ್ಟೆಗಳು ತಂಬಿ ಹರಿಯುತ್ತಿವೆ. ಮತ್ತೊಂದೆಡೆ ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಧಾರಕಾರ ಮಳೆಯಿಂದಾಗಿ ಜಲಪಾತಗಳು ಧುಮ್ಮಿಕ್ಕುತ್ತಿದ್ದು, ಈ ಸುಂದರ ದೃಶ್ಯಗಳನ್ನು ನೋಡಲು ಪ್ರವಾಸಿಗೆ ದಂಡೇ ಹರಿದುಬರುತ್ತಿದೆ. ಹಾಗೆಯೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ಹಾಗೂ ಪಾಂಡ್ರೆ ನದಿಗೆ ಜೀವಕಳೆ ಬಂದಂತಾಗಿದೆ. ಖಾನಾಪುರದಲ್ಲಿ ಭಾರೀ ಮಳೆಯಿಂದ ಮಲಪ್ರಭಾ ನದಿ ರಭಸವಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆ ಮುಜಾಗ್ರತಾ ಕ್ರಮವಾಗಿ ಖಾನಾಪುರ ತಾಲೂಕಿನ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ತಾತ್ಕಾಲಿಕ ನಿರ್ಬಂಧ ಹೇರಿದೆ. ಖಾನಾಪುರದ ಜಲಪಾತಗಳು ಮಳೆಗಾಲದಲ್ಲಿ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದ್ದು, ಇಲ್ಲಿ ಪ್ರತಿನಿತ್ಯವು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಇನ್ನು ಇದೀಗ ಇಲ್ಲಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಫಾಲ್ಸ್ ವೀಕ್ಷಣೆಗೆ ಬೆಳಗಾವಿ ಜಿಲ್ಲಾಡಳಿತ ತಾತ್ಕಾಲಿಕ ನಿರ್ಬಂಧ ಹೇರಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.