This is the title of the web page
This is the title of the web page

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ :: ವಲಸೆ -ಲೋಕಲ್‌ ಪೈಟ್‌ ; ಬಿಜೆಪಿಯಲ್ಲಿ ಹೆಚ್ಚಿದ ತಳಮಳ ?

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ :: ವಲಸೆ -ಲೋಕಲ್‌ ಪೈಟ್‌ ; ಬಿಜೆಪಿಯಲ್ಲಿ ಹೆಚ್ಚಿದ ತಳಮಳ ?

 

ಬೆಳಗಾವಿ : ಬೆಳಗಾವಿ ಜನರ ಹೃದಯ ವಿಶಾಲದ ಜತೆಗೆ ಇಲ್ಲಿನ ಕುಂದಾದಷ್ಟೇ ಸಿಹಿಯಾಗಿದೆ. ಆದರೆ ಬಿಜೆಪಿ ನಾಯಕರ ದುಡುಕಿನ ನಿರ್ಧಾರದಿಂದ ಜನತೆ ತಮ್ಮ ಹೃದಯವನ್ನು ಕಲ್ಲಾಗಿಸಿಕೊಂಡಿದ್ದಾರೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ಅಭ್ಯರ್ಥಿ ಸಂಕಷ್ಟ ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರೆ ತಪ್ಪಾಗಲಿಕಿಲ್ಲ.
ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯಸಭೆಯ ಮಾಜಿಸದಸ್ಯ ಹಾಗೂ

ಲಿಂಗಾಯತ ಸಮುದಾಯ ಮುಖಂಡರಾಗಿರುವ ಡಾ. ಪ್ರಭಾಕರ ಕೋರೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ ಕತ್ತಿ, ಮಾಜಿಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ್‌, ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಹಾಲಿ ಸಂಸದೆ ಮಂಗಳಾ ಅಂಗಡಿ ಸೇರಿದಂತೆ ಇನ್ನೂ ಹತ್ತು ಹಲವು ನಾಯಕರು ಜಿಲ್ಲೆಯಲ್ಲಿದ್ದಾರೆ ಮತ್ತು ಜಿಲ್ಲೆಗೆ ಚಿರಪರಿತರಿದ್ದಾರೆ.

ಆದರೂ ಬೇರೆ ಜಿಲ್ಲೆಯ ನಾಯಕರನ್ನು ಬೆಳಗಾವಿ ಕ್ಷೇತ್ರದಿಂದ ಕಣಕ್ಕೀಳಿಸಿರುವುದು ಎಷ್ಟು ಸರಿ ಎಂಬ ಚರ್ಚೆ ನಾಯಕರಲ್ಲಿ ಅಷ್ಟೇ ಅಲ್ಲ, ಬೇರು ಮಟ್ಟದ ಕಾರ್ಯಕರ್ತರಲ್ಲಿ ನಡೆದಿದೆ.
ವಲಸೆ ರಾಜಕಾರಣಿ ಎಂಬ ಹಣೆಪಟ್ಟಿಕೊಂಡಿರುವ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರಗೆ, ಸ್ಥಳಿಯ ಬಿಜೆಪಿ ನಾಯಕರು ನಿರೀಕ್ಷಿತ ಪ್ರಮಾಣದಷ್ಟು ಸಹಕಾರ ನೀಡುತ್ತಿಲ್ಲ. ಅದರಲ್ಲೂ ಡಾ. ಪ್ರಭಾಕರ ಕೋರೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಇನ್ನೀತರ ನಾಯಕರು ಬುಧವಾರ ನಡೆದ ಜಗದೀಶ ಶೆಟ್ಟರ ಅವರ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಕಾಣಿಕೊಳ್ಳಲಿಲ್ಲ. ಇದು ಜಿಲ್ಲೆಯ ವಿವಿಧ ಮೂಲೆ ಮೂಲೆಗಳಿಂದ ಆಗಮಿಸಿದ್ದ ಕಾರ್ಯಕರ್ತರಲ್ಲಿ ಚರ್ಚೆಗೆ ಹುಟ್ಟುಹಾಕಿದೆ.

ಆದರೆ ಕಾಂಗ್ರೆಸ್‌ ನಾಯಕರು, ಲಿಂಗಾಯತ ಸಮುದಾಯ ನಾಯಕರು, ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಮೇಲಿಂದ ಮೇಲೆ ಎದುರಾಳಿ ವಿರುದ್ಧ ಮುಗಿಬಿದ್ದು ಪ್ರತಿಸ್ಪರ್ಧಿ ಅಧಿಕಾರದ ಅವಧಿಯಲ್ಲಿ ಬೆಳಗಾವಿಗೆ ಮಾಡಿದ ಅನ್ಯಾಯ, ಯೋಜನೆಗಳ ಸ್ಥಳಾಂತರ ಕುರಿತು ಬೆತ್ತಲೆ ಮಾಡುತ್ತಲೇ ತೀವ್ರವಾಗಿ ಜಾಡಿಸುತ್ತಿದ್ದಾರೆ. ಪ್ರತಿ ದಿನವೂ ಕಾಂಗ್ರೆಸ್‌ ಎದುರಾಳಿ ವಿರುದ್ಧ ಒಂದಿಲ್ಲೊಂದು ಅಸ್ತ್ರವನ್ನು ಹೂಡುತ್ತಲೇ ಇದ್ದಾರೆ.

ಇದರಿಂದಾಗಿ ಸ್ವಾಭಿಮಾನಿ ಬೆಳಗಾವಿ ಜನರು ಜಾಗೃತಗೊಳ್ಳುವ ಮೂಲಕ ಜಿಲ್ಲೆಗಾಗಿರುವ ಅನ್ಯಾಯ ಹಾಗೂ ಜಿಲ್ಲೆಯಿಂದ ಪಕ್ಕದ ಜಿಲ್ಲೆಗೆ ಹೋಗಿರುವ ಯೋಜನೆಗಳು ಕುರಿತು ಚರ್ಚೆ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್‌ ಹೂಡಿರುವ ಜಾತಿ ಅಸ್ತ್ರ ಹಾಗೂ ಜಿಲ್ಲೆಗಾದ ಅನ್ಯಾಯ, ಯೋಜನೆಗಳಿಂದ ಜನರು ಎಚ್ಚೆತ್ತುಕೊಂಡಿದ್ದೇ ಆದಲ್ಲಿ ಬಿಜೆಪಿ ಭದ್ರಕೋಟೆ ಛಿದ್ರವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುವುದು ರಾಜಕೀಯ ಲೆಕ್ಕಾಚಾರವಾಗಿದೆ.