ಶಿವಮೊಗ್ಗ:ಬಿಜೆಪಿ ವಿರುದ್ಧವಾಗಿದ್ದು, ಒಂದೇ ಕುಟುಂಬದವರ ಕಪಿಮುಷ್ಠಿಗೆ ಒಳಗಾಗಬಾರದು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಇದೀಗ ಲೋಕಸಭೆ ಚುನಾವಣೆಯಲ್ಲೂ ತಮ್ಮ ಪುತ್ರನಿಗೆ ಟಿಕೆಟ್ ಸಿಗದ್ದಿದ್ದಕ್ಕೆ ಬಿಜೆಪಿ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ. ಅಲ್ಲದೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
ಪುತ್ರ ಕಾಂತೇಶ್ ಗೆ ಹಾವೇರಿ ಲೋಕಸಭೆ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಪುತ್ರನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈಶ್ವರಪ್ಪ ಇದೀಗ ಅಖಾಡಕ್ಕಿಳಿದಿದ್ದಾರೆ. ಇಂದು ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳೊಂದಿಗೆ ನಗರದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ ಸಭೆ ನಡೆಸಿದ ಈಶ್ವರಪ್ಪ, ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ ಹೊರತು ಮೋದಿ ಹಾಗೂ ಬಿಜೆಪಿ ವಿರುದ್ಧ ಹೋಗುತ್ತಿಲ್ಲ. ಬಿಜೆಪಿ ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿದೆ. ಅದನ್ನು ತಪ್ಪಿಸಲು ಸ್ಪರ್ಧೆಗೆ ಮುಂದಾಗಿದ್ದೇನೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.
ಈ ನಿರ್ಧಾರ ಬಿಜೆಪಿ ವಿರುದ್ಧವಾಗಿದ್ದು, ಒಂದೇ ಕುಟುಂಬದವರ ಕಪಿಮುಷ್ಠಿಗೆ ಒಳಗಾಗಬಾರದು. ನಾನು ಬಿಜೆಪಿಯ ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದೇನೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲ್ಲ, ಮೋದಿಯವರ ಕಟ್ಟಾ ಅನುಯಾಯಿಯಾಗಿರುವ ನಾನು ಪಕ್ಷದಲ್ಲೇ ಇರುತ್ತೇನೆ ಎಂದು ಹೇಳಿದರು.