ಚಿಕ್ಕೋಡಿ: ಕೃಷ್ಣಯ ಉಗಮಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರ ಸೇರಿದಂತೆ ಕೊಂಕಣ ಪ್ರದೇಶದಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದ್ದು, ಕೃಷ್ಣಾ ನದಿಗೆ 90,479 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 71,333 ಕ್ಯುಸೆಕ್ ಹಾಗೂ ದೂಧಗಂಗಾ ನದಿಯಿಂದ 19,146 ಕ್ಯುಸೆಕ್ ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಶುಕ್ರವಾರ ಒಟ್ಟು 90,479 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಗುರುವಾರ ಇದು 79,900 ಕ್ಯುಸೆಕ್‌ನಷ್ಟಿತ್ತು.
ತಾಲ್ಲೂಕಿನ ನದಿ ಜಲಾನಯನ ಪ್ರದೇಶದಲ್ಲಿ ಶುಕ್ರವಾರ ಮಳೆ ಪ್ರಮಾಣ ಕೊಂಚ ತಗ್ಗಿದ್ದರೂ, ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಮತ್ತು ಉಪನದಿಗಳ ಒಳಹರಿವಿನಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದೆ. ಇದರಿಂದ ನದಿ ದಂಡೆಯ ನಿವಾಸಿಗಳಲ್ಲಿ ನೆರೆ ಭೀತಿ ಆವರಿಸಿದ್ದು, ತಮ್ಮ ನೀರಾವರಿ ಪಂಪಸೆಟ್‌ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ದೂಧಗಂಗಾ ಮತ್ತು ವೇದಗಂಗಾ ನದಿಗಳು ದಡಸೂಸಿ ಹರಿಯುತ್ತಿದ್ದು, ಪಕ್ಕದ ಹೊಲಗದ್ದೆಗಳಿಗೆ ನುಗ್ಗುತ್ತಿವೆ. ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮ ಸ್ಥಾನದಲ್ಲಿರುವ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಸುಕ್ಷೇತ್ರ ನರಸಿಂಹವಾಡಿಯ ದತ್ತ ಮಂದಿರದೊಳಗೆ ನದಿ ನೀರು ಆವರಿಸಿದೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ್, ಭೋಜವಾಡಿ- ಕುನ್ನೂರ, ಸಿದ್ದಾಳ-ಅಕ್ಕೋಳ, ಜತ್ರಾಟ-ಭೀವಶಿ, ಮಮದಾಪುರ- ಹುನ್ನರಗಿ, ಕುನ್ನೂರ-ಬಾರವಾಡ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿಯೇ ಇವೆ. ಸಂಭವನೀಯ ನೆರೆ ಹಾವಳಿಯನ್ನು ಸಮರ್ಥವಾಗಿ ಎದುರಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದ್ದು, ನೊಡಲ್ ಅಧಿಕಾರಿಗಳು ಗ್ರಾಮದಲ್ಲಿಯೇ ಬೀಡು ಬಿಟ್ಟಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.
ತಾಲ್ಲೂಕಿನ ಮಾಂಜರಿ ಗ್ರಾಮದ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂಸೇವಕರು ಉಕ್ಕೇರಿ ಹರಿಯುತ್ತಿರುವ ನದಿ ದಡದ ಬಳಿ ಸಾರ್ವಜನಿಕರು ಸುಳಿಯದಂತೆ ಜಾಗೃತಿ ಮೂಡಿಸಿದರು. ರಾಘವೇಂದ್ರ ಲಂಬುಗೋಳ, ಹನುಮಂತ ಮಾಯನ್ನವರ, ಮುತ್ತಪ್ಪ ಅಸೋದೆ, ರಾಮು ಕುರಣೆ, ಅಪ್ಪಾಸಾಹೇಬ ಕಾಸಾಯಿ, ರಾಕೇಶ ಮಾಯನ್ನವರ ಪಾಲ್ಗೊಂಡಿದ್ದರು.
*ಮಳೆ ವಿವರ:*
ಚಿಕ್ಕೋಡಿ: 9.3 ಮಿ.ಮೀ., ಸದಲಗಾ-9.8 ಮಿ.ಮೀ, ಅಂಕಲಿ-8.6 ಮಿ.ಮೀ., ಜೋಡಟ್ಟಿ-7.8 ಮಿ.ಮೀ., ನಾಗರಮುನ್ನೋಳಿ-5.8 ಮಿ.ಮೀ. ಮಳೆ ದಾಖಲಿಸಲಾಗಿದೆ.