ಬೆಳಗಾವಿ:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಲಿಂಗಾಯತರ ಹೇಳಿಕೆಯನ್ನು ಲಿಂಗಾಯತ ಸಮಾಜದ ಮುಖಂಡರು ಯಾಕೆ ವಿರೋಧಿಸುತ್ತಿಲ್ಲ ಎಂದು ಆಮ್ ಆದ್ಮಿ ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ರಾಜಕುಮಾರ ಟೋಪಣ್ಣವರ ಪ್ರಶ್ನಿಸಿದರು.
ಶನಿವಾರ ನಗರದ ರವಿವಾರ ಪೇಟ್, ಮಾಳಿಗಲ್ಲಿ, ಮಾರ್ಕೇಟ್ ರಸ್ತೆಯಲ್ಲಿ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರು ಬಿ.ಎಲ್.ಸಂತೋಷ ಅವರ ಲಿಂಗಾಯತರ ಹೇಳಿಕೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಶ್ನೆ ಕೇಳಿದರೆ ಈ ಕುರಿತು ಪ್ರಶ್ನೆ ಕೇಳಬೇಡಿ ಎಂದಿದ್ದಾರೆ. ಅವರು ಸಮರ್ಥನೆನೂ ಮಾಡಿಕೊಳ್ಳುತ್ತಿಲ್ಲ. ವಿರೋಧವೂ ವ್ಯಕ್ತ ಪಡಿಸುತ್ತಿಲ್ಲ ಹಾಗಿದ್ದರೆ ಬಿ.ಎಲ್.ಸಂತೋಷ ಮಾತನಾಡಿದ್ದು ನಿಜ ಎನ್ನಿಸುತ್ತದೆ. ಹೀಗಾಗಿ ಬೆಳಗಾವಿಯಲ್ಲಿರುವ ಲಿಂಗಾಯತ ಕೆಲ ಸಮಾಜದ ಮುಖಂಡರು ಸಂತೋಷ ಹೇಳಿಕೆ ಖಂಡಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ನಾಲ್ಕು ಜನ ಲಿಂಗಾಯತ ಸಮಾಜದವರು ವಿವಿಧ ಪಕ್ಷಗಳಿಂದ ಸ್ಪರ್ಧೆ ನಡೆಸಿದ್ದಾರೆ. ಅವರನ್ನು ಕರೆದು ಹೊಂದಾಣಿಕೆ ಮಾಡುವ ಬದಲು ಒಂದೇ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಎಲ್ಲ ಸಮುದಾಯವರನ್ನು ಜೊತೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ. ಎಲ್ಲಾ ಸಮಾಜದ ಅಭಿವೃದ್ಧಿಯಾಗಬೇಕೆಂಬುಂದೇ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ ಎಂದರು.
ಎಂಇಎಸ್ ಸಂಘಟನೆಯನ್ನು ಸಂದರ್ಭಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುವ ಬಿಜೆಪಿ ಅವರೊಂದಿಗೆ ಹೊಂದಾಣಿಕೆ ಮಾಡುತ್ತಾರೆ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಂಇಎಸ್ ವಿರುದ್ಧ ಮಾತನಾಡುತ್ತಾರೆ ಇದು ಸರಿಯಲ್ಲ ಎಂದರು.
ಮೂಲಭೂತ ಸೌಕರ್ಯ, ಆರೋಗ್ಯದ ಬಗ್ಗೆ ಬಿಜೆಪಿ ಸ್ಥಳೀಯ ಪ್ರಣಾಳಿಕೆ ಮಾಡಿದ್ದಾರೆ. ಅದು ನಮ್ಮ ಪ್ರಣಾಳಿಕೆ ನಕಲು ಮಾಡಿದ್ದಾರೆ. ಜನರು ಇದನ್ನು ನೋಡಬೇಕು. ಅಲ್ಲದೆ,ನಮ್ಮ ಪ್ರಣಾಳಿಕೆಯಲ್ಲಿ ಉತ್ತರ ಮತಕ್ಷೇತ್ರದ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ಉತ್ತರ ಮತಕ್ಷೇತ್ರದ ಅಭಿವೃದ್ಧಿ ವಿಚಾರದ ಕುರಿತು ಅವರಿಗೆ ಚರ್ಚೆ ನಡೆಸಲು ಸವಾಲ್ ಹಾಕಿದರೂ ಯಾರೂ ಸ್ವೀಕರಿಸಲು ಸಾಧ್ಯವಿಲ್ಲ. ಕಾರಣ ಅವರಿಗೆ ಯಾವುದೇ ಅಭಿವೃದ್ಧಿ ವಿಷಯಗಳ ಮಾಹಿತಿ ಕೊರತೆ ಇದೆ ಎಂದರು.
ಈ ಸಂದರ್ಭದಲ್ಲಿ ಜುನೈದ ಪಾಶಾ, ಶಿವಾನಂದ ಕಾರಿ, ಅರವಿಂದ ಬೆಲ್ಲದ, ಶಂಕರ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.