ಬೆಳಗಾವಿ : ಚಾಲಕನ ನಿಯಂತ್ರಣ ತಪ್ಪಿದ ಲಾರಿ, ರಸ್ತೆ ಮೇಲೆ ಹೋಗುತ್ತಿದ್ದ ಕುರಿಗಳ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ 22 ಕುರಿಗಳು ಮೃತಪಟ್ಟಿದ್ದು, 15 ಕುರಿಗಳು ಗಾಯಗೊಂಡಿರುವ ಘಟನೆ ಭಾನುವಾರ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಹತ್ತಿರ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆದಿದೆ.
ಚಿಕ್ಕೋಡಿ ತಾಲೂಕಿನ ಅಮಲಗೇರಿ ಗ್ರಾಮದ ಕುರಿಗಾಹಿ ರಾಮಾ ಭೀರಪ್ಪ ಪೂಜಾರಿ ಎಂಬುವರಿಗೆ ಸೇರಿದ ಕುರಿಗಳಾಗಿವೆ. ಹಲಗಾ ಗ್ರಾಮದ ಜಮೀನಿನಲ್ಲಿ ತಂಗಲು ಕುರಿಗಳ ಸಮೇತ ಆಗಮಿಸಿದ್ದ ರಾಮಪ್ಪ ಪೂಜಾರಿ, ರಸ್ತೆ ಪಕ್ಕ ಹೊರಟಿದ್ದ ಕುರಿಗಳ ಹಿಂಡು ಕಂಡು ನಾಯಿ ಬೊಗಳಿದೆ. ನಾಯಿಗೆ ಹೆದರಿದ ಕುರಿಗಳು ಏಕಾಎಕಿ ಹೆದ್ದಾರಿಯತ್ತೆ ಓಡಿವೆ. ಇದೇ ಸಮಯಕ್ಕೆ ಧಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ಸಾಗಿದ ಹೆದ್ದಾರಿ ಮೇಲೆ ಲಾರಿ ವೇಗವಾಗಿ ಬಂದಿದೆ. ಈ ವೇಳೆ ಕುರಿಗಳ ಹಿಂಡು ಕಂಡ ಚಾಲಕ ಲಾರಿ ನಿಯಂತ್ರಿಸಲು ಪ್ರಯತ್ನ ನಡೆದ್ದಾನೆ. ಅಷ್ಟರಲ್ಲಿ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡ ಪರಿಣಾಮ ಕುರಿಗಳ ಹಿಂಡಿಗೆ ನುಗ್ಗಿಸಿದ್ದಾನೆ. ಲಾರಿಯ ಗುದ್ದಿದ ರಭಸಕ್ಕೆ ಹೆದ್ದಾರಿ ಮೇಲೆಯೇ ವಿಲವಿಲನೇ ಒದ್ದಾಡಿ ಕುರಿಗಳು ಸಾವನ್ನಪ್ಪಿವೆ. ಕುರಿಗಳ ಮಾರಣಹೋಮದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರ ಸ್ಥಗಿತವಾಗಿತ್ತು. ಘಟನೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು, ಹೆದ್ದಾರಿ ಮೇಲೆ ಸಂಚರಿಸುವವರು ಘಟನಾ ಸ್ಥಳಕ್ಕೆ ಬಂದು ಕುರಿಗಳ ದೇಹ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಹಾಗೂ ಸಾಕಿದ ಕುರಿ ಕಳೆದುಕೊಂಡ ಕುರಿಗಾಯಿಗಳ ಆಕ್ರಂದನ ನೋಡಿ ಕಣ್ಣಂಚಲಿ ನೀರು ಜಿನುಗುಡುತ್ತಿದ್ದವು. ಹಲವರು ಮಮ್ಮಲ ಮರುಕಪಟ್ಟು ಲಾರಿ ಲಾಕನ ವಿರುದ್ಧ ಹಿಡಿಶಾಕ ಹಾಕಿದರು. ಘಟನೆ ನಡೆಯುತ್ತಿದ್ದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಮೇಲೆ ಛಿದ್ರ ಛಿದ್ರವಾಗಿ ಬಿದ್ದಿರುವ ಕುರಿಗಳ ಮೃತ ದೇಹಗಳನ್ನು ತೆರವು ಕಾರ್ಯ ಮಾಡಿದರು. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.