ಬಸ್‌ನಲ್ಲಿ ಸೀಟ್ ಹಿಡಿಯಲು ಹರಸಾಹಸ, ರಾಜ್ಯದ ಭವಿಷ್ಯ ಬರೆಯಲಿರುವ ಮತದಾರರು
ನಾಳೆ ಬೆಳಗ್ಗೆ 7 ಗಂಟೆಯಿಂದಲೇ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಶುರು
ಬೆಳಗಾವಿ: ವಿಧಾನಸಭಾ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ತಮ್ಮ ಹಕ್ಕನ್ನು ಚಲಾಯಿಸಲು ಊರಿಗೆ ತೆರಳುವ ಮತದಾರರು ಬಸ್ ಸಿಗದೇ ಪರದಾಡುತ್ತಿದ್ದಾರೆ.
ಇಡೀ ರಾಜ್ಯದಲ್ಲಿ ಚುನಾವಣೆ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ನಾಳೆ ಬೆಳಗ್ಗೆಯಿಂದ ರಾಜ್ಯದಲ್ಲಿ ಬಹು ನಿರೀಕ್ಷಿತ ಮತದಾನ ಶುರುವಾಗ್ತಿದೆ. ವೋಟ್ ಮಾಡಲು ಸಜ್ಜಾಗಿರುವ ಬೆಳಗಾವಿ ಸೇರಿದಂತೆ ರಾಜ್ಯದ ಜನರು ಒಂದು ದಿನ ಮುಂಚೆಯೇ ತಮ್ಮ, ತಮ್ಮ ಊರುಗಳಿಗೆ ಹೊರಟಿದ್ದಾರೆ.
ನಾಳೆ ಬೆಳಗ್ಗೆ 7 ಗಂಟೆಯಿಂದಲೇ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಶುರುವಾಗಲಿದೆ. ನಾಳೆಯೇ ಊರುಗಳಿಗೆ ಹೋಗೋಕೆ ಕಷ್ಟವಾಗಬಹುದು ಎನ್ನುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜನರು ಒಂದು ದಿನ ಮುಂಚೆ ಬಸ್ ಹತ್ತುತ್ತಿದ್ದಾರೆ.
ಮತದಾನದ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ಬೆಂಗಳೂರಿನ ಹಲವು ಬಸ್ ನಿಲ್ದಾಣಕ್ಕೆ ಧಾವಿಸಿದ್ದಾರೆ. ಬೆಂಗಳೂರಿನ ಬಹುತೇಕ ಬಸ್ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ.
ಬಸ್ ಗಾಗಿ ಕಾಯ್ದು ಕುಳಿತ ಮತದಾರರು:ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ,ಕಾರವಾರ, ಹಾಸನ, ತುಮಕೂರು, ಮಂಡ್ಯ, ಶಿರಾ, ಚಿತ್ರದುರ್ಗ, ಮೈಸೂರು, ರಾಮನಗರ ಭಾಗಕ್ಕೆ ತೆರಳುತ್ತಿದ್ದಾರೆ.
ಬಸ್‌ಗಳು ನಿಲ್ದಾಣಕ್ಕೆ ಬಂದ ಕೂಡಲೇ ಕೆಲವೇ ಕ್ಷಣದಲ್ಲಿ ತುಂಬಿ ಹೋಗುತ್ತಿವೆ. ಕೆಲ ಊರುಗಳಿಗೆ ತೆರಳಲು ಬಸ್ ಸಿಕ್ಕಿದ್ರೆ, ಕೆಲವು ಭಾಗಗಳಿಗೆ ತೆರಳಲು ಜನರು ಬಸ್‌ಗಾಗಿ ಕಾದು ಕುಳಿತಿದ್ದಾರೆ.