This is the title of the web page
This is the title of the web page

ಲಿಂಗಾಯತರೆಲ್ಲರೂ ಯಡಿಯೂರಪ್ಪ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರದ ನಾಯಕರು ? ಬಿಜೆಪಿ ವರಿಷ್ಠರ ಸಂಧಾನ ವಿಫಲ: ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳದ ಈಶ್ವರಪ್ಪ, ಸ್ವತಂತ್ರ ಸ್ಪರ್ಧೆ ಖಚಿತ

ಲಿಂಗಾಯತರೆಲ್ಲರೂ ಯಡಿಯೂರಪ್ಪ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರದ ನಾಯಕರು ? ಬಿಜೆಪಿ ವರಿಷ್ಠರ ಸಂಧಾನ ವಿಫಲ: ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳದ ಈಶ್ವರಪ್ಪ, ಸ್ವತಂತ್ರ ಸ್ಪರ್ಧೆ ಖಚಿತ

 

ಶಿವಮೊಗ್ಗ: ಯಡಿಯೂರಪ್ಪ ಹಾಗೂ ಅವರ ಪುತ್ರರ ಕೈಯಲ್ಲಿ ಪಕ್ಷ ನಲುಗುತ್ತಿದೆ. ಲಿಂಗಾಯತರೆಲ್ಲರೂ ಯಡಿಯೂರಪ್ಪನವರ ಕೈಯಲ್ಲಿದ್ದಾರೆಂಬ ಭ್ರಮೆಯಲ್ಲಿ ಕೇಂದ್ರದ ನಾಯಕರಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರದೇ ರಾಜ್ಯಭಾರವಾಗಿದೆ. ನೊಂದ ಕಾರ್ಯಕರ್ತರು ಇವರಿಂದ ನಲುಗಿ ಹೋಗಿದ್ದಾರೆ’ ಎಂದರು.

ಪುತ್ರ ಕೆ.ಇ.ಕಾಂತೇಶ್’ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪ ಅವರ ಕೋಪ ಶಮನಕ್ಕೆ ಬಿಜೆಪಿ ವರಿಷ್ಠರು ನಡೆಸಿದ ಸಂಧಾನ ಮಾತುಕತೆ ವಿಫಲಗೊಂಡಿದೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾಮೋಹನ್ ಅಗರ್ವಾಲ್ ಹಾಗೂ ರಾಜ್ಯ ನಾಯಕರು ಭಾನುವಾರ ಈಶ್ವರಪ್ಪ ಮನೆಗೆ ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರಾದರೂ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ. ಇದರಿಂದಾಗಿ ವರಿಷ್ಠರು ಬರಿಗೈಯಲ್ಲಿ ವಾಪಸ್ ತೆರಳಿದರು.

ಭಾನವಾರ ಬೆಳಿಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಡಿ.ಎಸ್. ಅರುಣ್ ಹಾಗೂ ಇತರ ನಾಯಕರು ಶಿವಮೊಗ್ಗದ ಮಲ್ಲೇಶ್ವರ ನಗರದ ಈಶ್ವರಪ್ಪ ಮನೆಗೆ ಭೇಟಿ ನೀಡಿ, ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಸೋಮವಾರ ನಡೆಯುವ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.

ಆದರೆ, ತಾವು ಬಂಡಾಯದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಈಶ್ವರಪ್ಪ ಅವರು ಖಡಕ್ ಸಂದೇಶ ರವಾನಿಸಿದರು. ರಾಜ್ಯ ನಾಯಕರ ಮಾತುಕತೆ ವಿಫಲವಾದ ಬಳಿಕ, ಮಧ್ಯಾಹ್ನ ಸ್ವತಃ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾಮೋಹನ್ ಅಗರ್ವಾಲ್ ಈಶ್ವರಪ್ಪ ಮನೆಗೆ ಭೇಟಿ ನೀಡಿದರು. ಆದರೆ, ಬೇರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾತುಕತೆಯ ಮಧ್ಯದಲ್ಲಿಯೇ ಈಶ್ವರಪ್ಪ ಸಭೆಯಿಂದ ಹೊರಹೋದರು. ಇದರ ಪರಿಣಾಮ ಸಂಧಾನ ಯಶಸ್ವಿಯಾಗಲಿಲ್ಲ.