ಬೆಂಗಳೂರು: ನಂದಿನಿ ನಮ್ಮದು. ರಾಜ್ಯದ ಸುಮಾರು 80 ಲಕ್ಷ ರೈತರು ಹಸುಗಳನ್ನ ಸಾಕುತ್ತಿದ್ದಾರೆ. ಕಡಿಮೆ ಬೆಲೆಗೆ ರೈತರು ಹಾಲನ್ನ ಮಾರಾಟ ಮಾಡುತ್ತಿದ್ದಾರೆ. ನಮ್ಮ ರೈತರಿಗೆ ಮೊದಲು ಬೆಲೆ ಕೊಡಬೇಕು. ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಕೈಯಲ್ಲಿ ಏನು ಇಲ್ಲ. ಈ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಬೇಕು ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಚುನಾವಣೆ ಹೊತ್ತಲ್ಲೇ ನಂದಿನಿ ಹಾಗೂ ಕೆಎಂಎಫ್ ಉಳಿವಿನ ಬಗ್ಗೆ ದೊಡ್ಡ ಜಾಗೃತಿ ಮೂಡುತ್ತಿದೆ.ಪ್ರಜೆಗೆ ದೇಶ ಹೇಗೆ ಮುಖ್ಯವೋ, ಹಾಗೇ ಪ್ರಾದೇಶಿಕ ವಿಚಾರವೂ ಮುಖ್ಯ. ಮನೆಗೆ ಮಾರಿ ಊರಿಗೆ ಉಪಕಾರಿಯಾದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಅಷ್ಟಕ್ಕೂ ಈ ಮಾತು ನಾವು ಹೇಳುತ್ತಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಅಮುಲ್ ವಿರುದ್ಧ ರೊಚ್ಚಿಗೆದ್ದ ಕನ್ನಡಿಗರ ಅಂತರಾಳದ ಧ್ವನಿ ಇದು. ಕೆಎಂಎಫ್ ಮುಗಿಸುವ ಸಂಚು ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿದೆ.
ಅದರಲ್ಲೂ ಪ್ರಮುಖವಾಗಿ ಕರಾವಳಿ ಭಾಗದ ಬ್ಯಾಂಕುಗಳು ವಿಲೀನದ ಹೆಸರಲ್ಲಿ ಬೇರೆ ರಾಜ್ಯಗಳ ಬ್ಯಾಂಕ್‌ಗೆ ಸೇರಿವೆ. ಈಗಾಗಲೇ ಕನ್ನಡಿಗರ ಬ್ಯಾಂಕ್‌ಗಳ ಒಳಗೆ ಪರಭಾಷಿಕರು ಬಂದು ಕೂತಿದ್ದಾರೆ. ಅನ್ನುವ ಬ್ಯಾಂಕ್‌ಗಳ ಪರಭಾಷಿಕ ಸಿಬ್ಬಂದಿಗೆ ಕನ್ನಡಿಗರು ಪತಪತ ಬೆವರು ಸುರಿಯುವಂತೆ ಬೈಯುತ್ತಿದ್ದಾರೆ. ಇದೀಗ ಇಂತಹದ್ದೇ ಪರಿಸ್ಥಿತಿ ಬಡ ರೈತರ ತುತ್ತಿನ ಚೀಲ ಕೆಎಂಎಫ್ ಮೇಲೂ ಬೀಳುತ್ತಿದೆಯಾ ಎಂಬ ಅನುಮಾನ ದಟ್ಟವಾಗಿದೆ.
ಕನ್ನಡ ನಾಡಿನ ಕೋಟ್ಯಂತರ ರೈತರು ಹೈನುಗಾರಿಕೆ ನಂಬಿ ಬದುಕು ನಡೆಸುತ್ತಿದ್ದಾರೆ. ಅಕಾಲಿಕ ಮಳೆ ಅಥವಾ ಅತಿಯಾದ ಮಳೆ ಸುರಿದು ಬೆಳೆ ಕೈಕೊಟ್ಟ ಸಂದರ್ಭದಲ್ಲೂ ಅನ್ನಪೂರ್ಣೇಶ್ವರಿಯಂತೆ ಕೈಹಿಡಿದು ನಮ್ಮ ರೈತರನ್ನು ರಕ್ಷಿಸಿದ್ದು ಇದೇ ಕೆಎಂಎಫ್ ಅಥವಾ ನಂದಿನಿ ಹಾಲು. ಶುದ್ಧತೆಗೆ ಮತ್ತು ರುಚಿಗೆ ಹೆಸರು ಪಡೆದಿರುವ ನಂದಿನಿ ಉತ್ಪನ್ನ ಜಗತ್ತಿಗೇ ಸಪ್ಲೈ ಆಗುತ್ತಿದೆ. ಆದರೆ ಇದೀಗ ಕನ್ನಡಿಗರ ನಂದಿನಿ ಸಂಸ್ಥೆಗೆ ಕಂಟಕ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ. ಕನ್ನಡಿಗರ ನಂದಿನಿ ಸಂಸ್ಥೆಗೆ ಬೀಗ ಹಾಕಿಸಲು ಪರೋಕ್ಷ ಪ್ರಯತ್ನ ಸಾಗಿದ್ದು, ಅಮುಲ್ ಮೂಲಕ ಅದರ ಪ್ರಯತ್ನಗಳು ಸಾಗಿವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ.