ಇಂದು ಕೋರ್ ಕಮಿಟಿ ಸಭೆ: ಜೈಲು ಪಾಲಾದ ಹೆಚ್ ಡಿ ರೇವಣ್ಣ ಅಮಾನತಿಗೆ ಪಕ್ಷದಲ್ಲಿ ಹೆಚ್ಚಿದ ಒತ್ತಡ, ಇಂದು ಜಾಮೀನು ಭವಿಷ್ಯ ನಿರ್ಧಾರ

ಇಂದು ಕೋರ್ ಕಮಿಟಿ ಸಭೆ: ಜೈಲು ಪಾಲಾದ ಹೆಚ್ ಡಿ ರೇವಣ್ಣ ಅಮಾನತಿಗೆ ಪಕ್ಷದಲ್ಲಿ ಹೆಚ್ಚಿದ ಒತ್ತಡ, ಇಂದು ಜಾಮೀನು ಭವಿಷ್ಯ ನಿರ್ಧಾರ

 

ಬೆಂಗಳೂರು:   ಜೆಡಿಎಸ್ ಕೋರ್ ಸಮಿತಿ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಲಿದ್ದು ಅದರಲ್ಲಿ ಹೆಚ್ ಡಿ ರೇವಣ್ಣ ಅಮಾನತಿನ ಕುರಿತು ನಿರ್ಧಾರವಾಗಲಿದೆ ಎಂದು ತಿಳಿದುಬಂದಿದೆ.

ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.

ಹೆಚ್.ಡಿ.ರೇವಣ್ಣ ಅವರನ್ನು ಅಮಾನತು ಮಾಡಬೇಕೆಂದು ಪಕ್ಷದ ಮುಖಂಡರು ಒತ್ತಾಯಿಸುತ್ತಿದ್ದಾರೆ. ಇದೀಗ ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳು ಹಾಗೂ ಅವರನ್ನು ಎಸ್‌ಐಟಿ ತಂಡ ಬಂಧಿಸಿ ಜೈಲುಪಾಲಾಗಿರುವುದು ಪಕ್ಷದ ಕಾರ್ಯಕರ್ತರು ಮುಜುಗರ ಎದುರಿಸುವಂತಾಗಿದೆ. ಪಕ್ಷದ ಬಗ್ಗೆ ನಾಯಕರಿಗೆ ಗಟ್ಚಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಕೂಡಲೇ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಎಸ್ ಐಟಿ ಕಸ್ಟಡಿಯಲ್ಲಿದ್ದ ಹೆಚ್ ಡಿ ರೇವಣ್ಣ ಅವರನ್ನು ಬೆಂಗಳೂರಿನ 17ನೇ ಎಸಿಎಂಎಂ ಕೋರ್ಟ್ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಅವರೀಗ ಕೈದಿ ನಂಬರ್ 4567 ಆಗಲಿದ್ದಾರೆ.

ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ರೇವಣ್ಣ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಒಂದು ವೇಳೆ ಜಾಮೀನು ಸಿಗದ್ದಿದ್ದರೆ ಮೇ 14ರವರೆಗೆ ರೇವಣ್ಣ ಜೈಲಿನಲ್ಲೇ ಇರಬೇಕಾಗುತ್ತದೆ. ರಾಜಕಾರಣಿಯಾಗಿ, ಶಾಸಕರಾಗಿ ಐಷಾರಾಮಿ ಜೀವನ ನಡೆಸಿದ್ದ ರೇವಣ್ಣ, ಸೆಂಟ್ರಲ್ ಜೈಲಿನ ಕ್ವಾರಂಟೈನ್ ಸೆಲ್​ನಲ್ಲಿ ಕಳೆದ ರಾತ್ರಿ ಕಳೆದಿದ್ದಾರೆ. ರಾತ್ರಿ ನೀಡಿದ್ದ ಮುದ್ದೆ, ಚಪಾತಿ, ರೈಸ್, ಸಾಂಬಾರ್ ತಡವಾಗಿ ಸೇವಿಸಿದ್ದಾರೆ. ಇತರೆ ಕೈದಿಗಳಂತೆ ಜೈಲಿನಲ್ಲಿ ನೀಡುವ ಊಟವನ್ನೇ ಅವರು ಸೇವಿಸಿದ್ದಾರೆ. ಮನೆಯವರು ತಂದು ಕೊಟ್ಟಿರುವ ಬಟ್ಟೆಯನ್ನು ಪಡೆದಿದ್ದಾರೆ.

ರಾತ್ರಿ ತಡವಾಗಿ ಊಟ ಮಾಡಿ ಮೌನಕ್ಕೆ ಜಾರಿದ್ದಾರೆ. ರಾತ್ರಿ 1 ಗಂಟೆಯವರೆಗೆ ನಿದ್ರೆ ಮಾಡದೆ ಯೋಚಿಸುತ್ತಿದ್ದರು. ಬಳಿಕ ಜೈಲಿನ ಕೊಠಡಿಯಲ್ಲಿ ನಿದ್ರೆಗೆ ಜಾರಿದ್ದಾರೆ. ಇನ್ನು ಹೆಚ್​.ಡಿ.ರೇವಣ್ಣ ಆರೋಗ್ಯ ಸರಿ‌ ಇಲ್ಲದ ಕಾರಣ ನಿನ್ನೆ ರಾತ್ರಿ ಜೈಲಾಧಿಕಾರಿಗಳು ಅವರ ಮೇಲೆ ಹೆಚ್ಚು ನಿಗಾ ಇಟ್ಟಿದ್ದರು. ರೇವಣ್ಣ ಇದ್ದ ಕೊಠಡಿ ಬಳಿ ಓರ್ವ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಇಂದು ಬೆಳಗ್ಗೆ 5.30ಕ್ಕೆ ನಿದ್ರೆಯಿಂದ ಎದಿದ್ದಾರೆ ಎಂದು ತಿಳಿದುಬಂದಿದೆ.