ಬೆಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್. ಬೊಮ್ಮಾಯಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಜೂನ್ 6 ರಂದು ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಮ್ಮ ತಂದೆ ದಿವಂಗತ ಎಸ್. ಆರ್. ಬೊಮ್ಮಾಯಿಯವರ 99 ಜನ್ಮ ದಿನಾಚರಣೆಯನ್ನು ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಎಜ್ಯುಕೇಶನ್ ಮತ್ತು ವೆಲ್ ಫೇರ್ ಫೌಂಡೇಶನ್ ವತಿಯಿಂದ ಜೂನ್ 6 ರಂದು ಸಂಜೆ 5 ಗಂಟೆಗೆ ಗಾಂಧಿ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ದಿ. ಎಸ್. ಆರ್. ಬೊಮ್ಮಾಯಿಯವರ ಕುರಿತು ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ನವರು ಹೊರ ತಂದಿರುವ ಕಾಫಿ ಟೇಬಲ್ ಪುಸ್ತಕವನ್ನು ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರು ಪದ್ಮವಿಭೂಷಣ ಶ್ರೀ ಎಸ್. ಎಂ. ಕೃಷ್ಣ ಅವರು ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದ ಆಧ್ಯಕ್ಷತೆಯನ್ನು ಮಾಜಿ ಸಚಿವರಾದ ಶ್ರೀ ಆರ್.ವಿ. ದೇಶಪಾಂಡೆ ವಹಿಸಿಕೊಳ್ಳಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್, ಮಾಜಿ ಸಭಾಪತಿಗಳಾದ ಶ್ರೀ ಬಿ.ಎಲ್. ಶಂಕರ್ ಅವರು ಕೃತಿ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ನಾಗಚಂದ್ರಿಕಾ ಭಟ್ ಅವರ ಗಾಯನ ಕಾರ್ಯಕ್ರಮ ಇದೆ ಎಂದು ತಿಳಿಸಿದ್ದಾರೆ.