ಮೈಸೂರು: ಮುಸ್ಲಿಮರಿಗೆ ನೀಡಲಾಗಿದ್ದ 27 ವರ್ಷಗಳ ಹಿಂದಿನ ಮೀಸಲಾತಿಯನ್ನು ಹಿಂಪಡೆದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದು “ಕಾನೂನುಬಾಹಿರ” ಎಂದು ಕರೆದರು. ಬಿಜೆಪಿ ಸೇಡಿನ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಹಿಂಪಡೆದಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಮೀಸಲಾತಿಯನ್ನು ಸಾಧನವಾಗಿ ಬಳಸಿಕೊಂಡಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬೇದಿದ್ದೇ ಆದರೆ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುತ್ತೇವೆಂದು ರಾಜ್ಯ ಕಾಂಗ್ರೆಸ್ ಭಾನುವಾರ ಭರವಸೆ ನೀಡಿದೆ.
ನಗರದ ಟೌನ್ ಹಾಲ್ ಎದುರು ಭಾನುವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ‘ಸಂವಿಧಾನ ರಕ್ಷಿಸಿ, ದೇಶ ಉಳಿಸಿ’ ಎಂಬ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಮೀಸಲಾತಿ ಕುರಿತು ಎದುರಾಗಿರುವ ಗೊಂದಲಗಳನ್ನು ನಿವಾರಣೆ ಮಾಡಲಿದೆ ಎಂದು ಹೇಳಿದರು.
ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತಂದು ದಲಿತರು ಮತ್ತು ಹಿಂದುಳಿದವರ ಹಿತ ಕಾಪಾಡುತ್ತೇವೆ. ಸಂವಿಧಾನ ಮತ್ತು ಮಂಡಲ್ ಆಯೋಗದ ವರದಿಯನ್ನು ಬಿಜೆಪಿ ವಿರೋಧಿಸುತ್ತಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಮೀಸಲಾತಿ ಕೋಟಾ ಹೆಚ್ಚಿಸಿದ್ದೇವೆ ಎಂದು ಹೇಳುವ ಮೂಲಕ ಬಿಜೆಪಿ ಜನರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನಕ್ಕೆ ತಿದ್ದುಪಡಿ ತಂದು, ಕಾನೂನು ಮಾಡಿ 9ನೇ ಶೆಡ್ಯೂಲ್‌ಗೆ ಸೇರಿಸಲು ಕ್ರಮ ಕೈಗೊಳ್ಳದೇ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೂಗಿಗೆ ತುಪ್ಪ ಸವರುವ ಕೆಲಸವನ್ನಷ್ಟೆ ಸರ್ಕಾರ ಮಾಡಿದೆ. ನಾಲ್ಕು ತಿಂಗಳಾದರೂ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿಲ್ಲ. ಹೀಗಿರುವಾಗ, ಮೀಸಲಾತಿ ಹೆಚ್ಚಳ ಊರ್ಜಿತವಾಗದು. ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಹೆಚ್ಚಿಸಬೇಕೇ ಹೊರತು, ಒಂದು ಜಾತಿಯನ್ನು ಇನ್ನೊಂದರ ಮೇಲೆ ಎತ್ತಿ ಕಟ್ಟುವುದು ಯಾವ ನ್ಯಾಯ 28 ವರ್ಷಗಳಿಂದ ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಮೀಸಲಾತಿಯನ್ನು ಕಿತ್ತು ಬೇರೆಯವರಿಗೆ ಹಂಚಿದ್ದು ಸರಿಯೇ? ಬಾಯಿ ಮಾತಿನಲ್ಲಿ ಮೀಸಲಾತಿ ಹೆಚ್ಚಿಸಿದರೆ ರಕ್ಷಣೆ ಸಿಗುತ್ತದೆಯೇ’ ಎಂದು ಕೇಳಿದರು. ಮೀಸಲಾತಿ ಹೆಚ್ಚಿಸಲು ಹಾಗೂ ಒಳಮೀಸಲಾತಿ ನೀಡಲು ನಮ್ಮ ವಿರೋಧವಿಲ್ಲ. ಆದರೆ, ಈ ಕಾರ್ಯ ಸಂವಿಧಾನಾತ್ಮಕವಾಗಿ ಆಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮಾತನಾಡಿ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ಡಬಲ್ ದ್ರೋಹ ಮಾಡಿದೆ ಎಂದು ಆರೋಪಿಸಿದರು ಅವರ ಡಿಎನ್‌ಎ ಸಂವಿಧಾನ, ದಲಿತರು, ಬಡವರು ಮತ್ತು ಹಿಂದುಳಿದ ಸಮುದಾಯಗಳಿಗೆ ವಿರುದ್ಧವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಾಜಿ ಸಚಿವರಾದ ಹೆಚ್ ಸಿ ಮಹದೇವಪ್ಪ, ತನ್ವೀರ್ ಸೇಠ್ ಮತ್ತು ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಸಿದುಕೊಂಡಿರುವುದು ಅಸಂವಿಧಾನಿಕವಾಗಿದೆ ಎಂದು ಹೇಳಿದರು.