This is the title of the web page
This is the title of the web page

ರಾಮ ಮಂದಿರ ಉದ್ಘಾಟನೆ ಮತವಾಗಿ ಪರಿವರ್ತನೆಯಾಗಲಿಲ್ಲ..!?

ರಾಮ ಮಂದಿರ ಉದ್ಘಾಟನೆ ಮತವಾಗಿ ಪರಿವರ್ತನೆಯಾಗಲಿಲ್ಲ..!?

 

ವಿಶೇಷ ವರದಿ

ಬೆಳಗಾವಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಮನೂರು ಎಂದೇ ಕರೆಸಿಕೊಳ್ಳುವ ಇತಿಹಾಸ ಪ್ರಸಿದ್ಧ ಅಯೋಧ್ಯೆ ಇರುವ ಫೈಝಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಲಲ್ಲು ಸಿಂಗ್ ಅವರನ್ನು ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರು ಸೋಲಿಸಿದ್ದಾರೆ. ಬಿಜೆಪಿಯ ಇಂತಹದೊAದು ಹೀನಾಯ ಸೋಲಿನ ಕಾರಣದಿಂದ ಫೈಜಾಬಾದ್ ಕ್ಷೇತ್ರವು ಇದೀಗ ಇಡೀ ದೇಶದ ಗಮನ ಸೆಳೆದಿದೆ. ಏಕೆಂದರೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯು ಈ ಕ್ಷೇತ್ರದ ವ್ಯಾಪ್ತಿಯೊಳಗೇ ಬರುತ್ತದೆ.
ಇದೇ ಕ್ಷೇತ್ರದಲ್ಲಿ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಲಲ್ಲುಸಿಂಗ್ ಅವರು ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ವಿರುದ್ಧ ಸೋಲು ಕಂಡಿದ್ದಾರೆ. ಈ ಮೂಲಕ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಲಲ್ಲುಸಿಂಗ್ ಅವರು ಇಲ್ಲಿನ ಮತದಾರ ಪ್ರಭುಗಳ ಅವಕೃಪೆಗೆ ಪಾತ್ರರಾಗಿದ್ದಾರೆ.
ಹಿಂದೂ ಸಮುದಾಯದ ಹೆಬ್ಬಯಕೆಯಂತೆ 500 ವರ್ಷಗಳ ಬಳಿಕ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರ ನಿರ್ಮಾಣದ ಸಂತಸವೇ ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ಮತವಾಗಿ ಪರಿವರ್ತನೆಗೊಂಡು ಮುಂದೆ ಭಾರಿ ಬಹುಮತದೊಂದಿಗೆ ಕೇಂದ್ರದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಪಕ್ಕಾ ಎಂದೇ ಹೇಳಲಾಗುತ್ತಿತ್ತು.

ಈ ಬಾರಿಯ ಚುನಾವಣೆಯಲ್ಲಿ ರಾಮಮಂದಿರ ನಿರ್ಮಾಣ ಬಿಜೆಪಿಯ ಸೈದ್ಧಾಂತಿಕ ಯೋಜನೆಗಳಲ್ಲೊಂದಾಗಿತ್ತು. ಈ ರಾಮನೂರಿನಲ್ಲೇ ಕಮಲ ಕಮರಿದ್ದು ಇದೀಗ ಕೇಸರಿ ಪಾಳಯಕ್ಕೆ ದೊಡ್ಡ ಮರ್ಮಾಘಾತವನ್ನುಂಟು ಮಾಡಿದೆ.
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಐತಿಹಾಸಿಕ ಬೃಹತ್ ರಾಮ ಮಂದಿರ ನಿರ್ಮಿಸುವ ಮೂಲಕ ಪಿಎಂ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ದೇಶದ ಅಸಂಖ್ಯ ಜನರ ನೂರಾರು ವರ್ಷಗಳ ಕನಸನ್ನು (2024 ಜನವರಿ 22 ರಂದು) ನನಸಾಗಿಸಿ ಹೊಸ ಇತಿಹಾಸವನ್ನೇ ಬರೆಯಿತು. ಆದರೆ ಇದಾದ ಕೇವಲ ನಾಲ್ಕೇ ನಾಲ್ಕು ತಿಂಗಳ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿಯೇ ಎಂದಿಗೂ ಅರಗಿಸಿಕೊಳ್ಳಲಾಗದಂತಹ ಹೀನಾಯ ಸೋಲು ಅನುಭವಿಸಿದ್ದು, ಅದೇಕೆ ರಾಮನೂರಿನಲ್ಲಿ ಕಮಲ ಅರಳಲಿಲ್ಲವೆಂದು ಬೇರೆ ಬೇರೆ ದೃಷ್ಟಿಕೋನಗಳಿಂದ ವಿಶ್ಲೇಷಿಸಲಾಗುತ್ತಿದೆ.
ಏತನ್ಮಧ್ಯೆ ದೇಶವ್ಯಾಪಿ ಜನಪ್ರಿಯವಾಗಿದ್ದ “ರಾಮಾಯಣ” ಟಿವಿ ಧಾರಾವಾಹಿಯಲ್ಲಿ ಲಕ್ಷ್ಮಣ ಪಾತ್ರಧಾರಿಯಾಗಿ ಖ್ಯಾತಿ ಪಡೆದಿದ್ದ ಸುನೀಲ್ ಲಹ್ರಿ ಅವರು ಅಯೋಧ್ಯೆಯಲ್ಲಿ ಬಿಜೆಪಿಯ ಸೋಲಿನ ಕುರಿತು ತಮ್ಮ ನಿರಾಸೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಸುನೀಲ್ ಲಹ್ರಿ ಅವರು ಬಾಹುಬಲಿಯಲ್ಲಿ ಕಟ್ಟಪ್ಪ ಕೊಲ್ಲುವ ಬಾಹುಬಲಿ ಸಿನಿಮಾದ ಚಿತ್ರ ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಕಟ್ಟಪ್ಪನ ಮೇಲೆ ಅಯೋಧ್ಯೆ ಎಂದು ಬರೆಯಲಾಗಿದೆ. ಅದರ ಜೊತೆಗೆ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಅವರು “ಸೀತಾ ಮಾತೆ ವನವಾಸದಿಂದ ಮರಳಿದ ಬಳಿಕ ಆಕೆಯನ್ನು ಶಂಕಿಸಿದವರು ಇದೇ ಅಯೋಧ್ಯೆಯ ನಾಗರಿಕರೆಂಬುದನ್ನು ನಾವು ಮರೆತಿದ್ದೇವೆ. ದೇವರನ್ನೇ ನಿರಾಕರಿಸುವ ವ್ಯಕ್ತಿಗೆ ಏನೆಂದು ಕರೆಯಲಾಗುತ್ತದೆ? ಸ್ವಾರ್ಥಿ. ಅಯೋಧ್ಯೆಯ ನಾಗರಿಕರು ಯಾವತ್ತೂ ತಮ್ಮ ರಾಜನಿಗೆ ದ್ರೋಹವೆಸಗಿದ್ದಕ್ಕಾಗಿ ಇತಿಹಾಸ ಸಾಕ್ಷಿಯಾಗಿದೆ. ನಾಚಿಕೆಗೇಡು,” ಎಂದು ಬರೆದಿದ್ದಾರೆ.
ಇನ್ನೊಂದು ಪೋಸ್ಟ್ನಲ್ಲಿ “ಅಯೋಧ್ಯೆಯ ಪ್ರೀತಿಯ ನಾಗರಿಕರೇ ನಾವು ನಿಮ್ಮ ಮಹಾನತೆಯನ್ನು ಗೌರವಿಸುತ್ತೇವೆ. ಸೀತಾ ಮಾತೆಯನ್ನೂ ಬಿಟ್ಟುಬಿಡದವರು ನೀವು

ನೀವು ದ್ರೋಹವೆಸಗಿದ್ದು ನಮಗೆ ಆಘಾತ ತಂದಿಲ್ಲ. ಇಡೀ ದೇಶ ನಿಮ್ಮನ್ನು ಮತ್ತೆ ಗೌರವದಿಂದ ಎಂದೂ ಕಾಣುವುದಿಲ್ಲ,” ಎಂದೂ ಬರೆದಿದ್ದಾರೆ.
ಇನ್ನು ರಾಮನೂರಿನಲ್ಲಿ ಕಮಲ ಅರಳದಿರಲು ಕಾರಣಗಳು ಹತ್ತಾರು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲಿ ಪ್ರಮುಖವಾಗಿ ರಾಮ ಮಂದಿರ ಹಾಗೂ ಅಯೋಧ್ಯೆಯ ವಿಮಾನ ನಿಲ್ದಾಣದ ಸುತ್ತಮುತ್ತ ನಡೆಯುತ್ತಿರುವ ಭೂಸ್ವಾಧೀನದ ವಿರುದ್ಧ ಅಯೋಧ್ಯೆಯ ಹಲವು ಗ್ರಾಮಗಳ ಜನರು ತೀವ್ರ ಆಕ್ರೋಶಗೊಂಡಿದ್ದರು. ಅಯೋಧ್ಯೆಯ ಇಂತಹ ಸ್ಥಳೀಯ ಸಮಸ್ಯೆಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾಯಕರ ಗಮನಕ್ಕೆ ಬಾರದೇ ಹೋಗಿದ್ದು, ಕಮಲದ ಸೋಲಿಗೆ ಖೆಡ್ಡಾ ತೋಡಿದಂತಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಭೂಸ್ವಾಧೀನದ ಕೋಪದ ಜೊತೆಗೆ ನಿರುದ್ಯೋಗ, ಹಣದುಬ್ಬರ, ಸಂವಿಧಾನ ಬದಲಿಸುವ ಮಾತು ಕೂಡ ಇಲ್ಲಿ ಬಿಜೆಪಿಗೆ ತಿರುಗುಬಾಣವಾಯಿತು. ಬಿಜೆಪಿಯ ಅಭ್ಯರ್ಥಿ ಲಲ್ಲು ಸಿಂಗ್ ಕೂಡ ಇಲ್ಲಿ ಮತ ಪ್ರಚಾರದ ವೇಳೆ ಸಂವಿಧಾನ ಬದಲಿಸುವ ಮಾತಾಡಿದ್ದರು. ಸಂವಿಧಾನ ಬದಲಿಸುವುದಕ್ಕೆ ಬಿಜೆಪಿಗೆ 400 ಸೀಟುಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.

ಇದರ ಬಗ್ಗೆ ಕೆಲವು ಸ್ಥಳೀಯರು “ಬಿಜೆಪಿಯ ಅಭ್ಯರ್ಥಿ ಲಲ್ಲು ಸಿಂಗ್ ಈ ರೀತಿ ಮಾತನಾಡಬಾರದಿತ್ತು. ಇದೇ ವಿಚಾರವನ್ನು ಅವದೇಶ್ ಕುಮಾರ್ ಅವರು ತಮ್ಮ ಎಲ್ಲಾ ಪ್ರಚಾರ ಸಮಾವೇಶಗಳಲ್ಲಿ ವಿಷಯವನ್ನಾಗಿ ತೆಗೆದುಕೊಂಡರು. ಇದರ ಜೊತೆಗೆ ಪೇಪರ್ ಲೀಕ್ ಹಗರಣ, ನಾವೂ ಕೂಡ ಇದರ ಸಂತ್ರಸ್ತರು. ಏಕೆಂದರೆ ಇದರಿಂದ ನಮಗೂ ಉದ್ಯೋಗವಿಲ್ಲ, ಇಲ್ಲಿ ನಮ್ಮ ಸಂಸದರು ಏನು ಕೆಲಸ ಮಾಡಿಲ್ಲ, ಹೀಗಾಗಿ ಜನ ಬದಲಾವಣೆಗಾಗಿ ಮತ ಹಾಕಿದ್ದಾರೆ. ರಾಮ ಮಂದಿರ ಹಾಗೂ ರಾಮಪಥದ (ಅಯೋಧ್ಯೆಗೆ ಹೋಗುವ ದಾರಿ) ಹೆಸರಿನಲ್ಲಿ ಅವರು ತಮ್ಮ ತಪ್ಪುಗಳನ್ನು ಮುಚ್ಚಿಕೊಂಡರು” ಎಂದು ತೀವ್ರ ಸಮಾಧಾನ ಹೊರಹಾಕಿದ್ದಾರೆ.
ಅಂತೆಯೇ ಇಲ್ಲಿನ ಕೆಲವು ಬಿಜೆಪಿ ಬೆಂಬಲಿಗರು ಕೂಡ ಬಿಜೆಪಿಯ ಸೋಲಿನ ಬಗ್ಗೆ “ರಾಮ ಮಂದಿರದ ಅದ್ದೂರಿತನ ಹೊರಗಿನವರನ್ನು ಆಕರ್ಷಿಸಿದೆ. ಆದರೆ ಇಲ್ಲಿನ ನಿವಾಸಿಗಳಿಗೆ ಇದರಿಂದ ಆದ ಅನಾನುಕೂಲವೇ ಹೆಚ್ಚು. ನಿಜ ಹೇಳಬೇಕೆಂದರೆ ಕೆಲವೇ ಕೆಲವು ಸ್ಥಳೀಯರಷ್ಟೇ ಅಯೋಧ್ಯೆಗೆ ಹೋಗುತ್ತಾರೆ. ಆದರೆ ಇಲ್ಲಿಗೆ ಬರುವ ಬಹುತೇಕರು ಹೊರಗಿನವರು, ರಾಮ ನಮ್ಮ ಆರಾಧ್ಯ ದೇವ ಆದರೆ ನಮ್ಮ ಜೀವನೋಪಾಯವನ್ನೇ ಅದಕ್ಕಾಗಿ ಕಸಿದುಕೊಂಡರೆ ನಾವು ಬದುಕುವುದು ಹೇಗೆ? ರಾಮಪಥದ ನಿರ್ಮಾಣದ ವೇಳೆ ಇಲ್ಲಿನ ಸ್ಥಳೀಯರಿಗೆ ಅಂಗಡಿ ನಿರ್ಮಿಸುವುದಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಲಾಯ್ತು, ಆದರೆ ಅದಾವುದು ಆಗಲೇ ಇಲ್ಲ. ಹಾಗೆಯೇ ಲಲ್ಲು ಸಿಂಗ್ ಅವರ ವಿರುದ್ಧ ಸಾಕಷ್ಟು ಆಡಳಿತ ವಿರೋಧಿ ಅಲೆ ಇತ್ತು. ಅವರು ಅಯೋಧ್ಯೆಯ ಜನರಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಅಯೋಧ್ಯೆಯ ಜನರಿಗಾಗಿ ಕೆಲಸ ಮಾಡುವುದನ್ನು ಬಿಜೆಪಿ ಮರೆತಿದೆ, ಅದರ ಜೊತೆಗೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿ ಲಲ್ಲು ಸಿಂಗ್ ಸ್ಥಳೀಯರ ಕೋಪಕ್ಕೆ ತುತ್ತಾದರು’ ಎಂದು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯ ಸಾಧಿಸಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವದೇಶ್ ಪ್ರಸಾದ್ ಅವರು ದಲಿತ ನಾಯಕ ಎಂಬ ಕಾರಣಕ್ಕೆ ಮಯಾವತಿಯವರ ಬಿಎಸ್‌ಪಿ ಮತಗಳು ಸಮಾಜವಾದಿ ಪಕ್ಷದತ್ತ ಧ್ರುವೀಕರಣಗೊಂಡವು. ಒಂಭತ್ತು ಬಾರಿ ಶಾಸಕರಾಗಿದ್ದ ಅವದೇಶ್ ಅವರು ಯುಪಿಯ ಪ್ರಮುಖ ದಲಿತ ನಾಯಕರೂ ಆಗಿದ್ದಾರೆ.
ಗೆದ್ದು ಬೀಗುವ ಜೊತೆ ಕೇಸರಿ ಪಾಳಯದ ತೀವ್ರ ಮುಖಭಂಗಕ್ಕೆ ಕಾರಣವಾಗಿರುವ ಅವದೇಶ್ ಪ್ರಸಾದ್ ಅವರು ತಮ್ಮ ಇಂತಹದೊAದು ಐತಿಹಾಸಿಕ ಗೆಲುವಿನ ಹಿನ್ನೆಲೆ ‘ಇದೊಂದು ಐತಿಹಾಸಿಕ ಜಯ, ನಮ್ಮ ರಾಷ್ಟ್ರೀಯ ಅಧ್ಯಕ್ಷರು ಇಲ್ಲಿ ನಮ್ಮನ್ನು ಕಣಕ್ಕಿಳಿಸಿದರು. ಜನ ಜಾತಿ ಸಮುದಾಯವನ್ನು ಮರೆತು ನನಗೆ ಮತ ಹಾಕಿದರು. ನಾವಿಲ್ಲಿ ಒಳ್ಳೆ ಕೆಲಸ ಮಾಡಿದ್ದೇವೆ. ಆದರೆ ರಾಮ ಮಂದಿರ ಉದ್ಘಾಟನೆ ಮತವಾಗಿ ಪರಿವರ್ತನೆಯಾಗಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.