ಹುಬ್ಬಳ್ಳಿ, ಏ 25: ಕರ್ನಾಟಕ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಹುಬ್ಬಳ್ಳಿಯಲ್ಲಿನ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ನೇಹಾ ನಿವಾಸಕ್ಕೆ ಇಂದು ಗುರುವಾರ ಭೇಟಿ ನೀಡಿದ್ದಾರೆ. ನಿರಂಜನ್ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸಿಎಂ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕೋಪದಲ್ಲಿ ಯಾರಿಗಾದರೂ ನೋವು ತರುವ ಹಾಗೆ ಮಾತಾಡಿದ್ದರೆ ಕ್ಷಮೆ ಕೋರುತ್ತೇನೆ ಎಂದ ನಿರಂಜನ್ ಹಿರೇಮಠ ತಿಳಿಸಿದರು.ಗುರುವಾರ (ಏಪ್ರಿಲ್ 25) ಹುಬ್ಬಳ್ಳಿಗೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಮೃತ ನೇಹಾಳ ತಂದೆ ನಿರಂಜನ್ ಹಿರೇಮಠ ಹಾಗೂ ಕುಟುಂಬಸ್ಥರೊಂದಿಗೆ ಕೆಲ ಹೊತ್ತು ಮಾತನಾಡಿದರು, ಸಾಂತ್ವನ ಹೇಳಿದರು.
ಇದೇ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೇಹಾ ಹಿರೇಮಠ ಹತ್ಯೆ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ನೇಹಾ ಕೊಲೆ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ರಚನೆ ಮಾಡಿದ್ದೇವೆ ಎಂದು ತಿಳಿಸಿದರು
ಬಿಜೆಪಿಯವರು ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ ಎಂದರು.
ನೇಹಾ ಹತ್ಯೆ ಪ್ರಕರಣದಲ್ಲಿ ನಾನು ರಾಜಕೀಯ ಮಾಡಲು ಇಷ್ಟಪಡುವುದಿಲ್ಲ. ಕಾಂಗ್ರೆಸ್ ರಾಜಕೀಯ ಮಾಡಿಲ್ಲ. ನೇಹಾ ಕುಟುಂಬದವರು ತುಂಬಾ ದುಃಖದಲ್ಲಿದ್ದಾರೆ. ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ನಿರಂಜನ್ ಹಿರೇಮಠ ಅವರ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಅಭಯ ನೀಡಿದರು.
ಮೃತ ಹೆಣ್ಣುಮಗಳಾದ ನೇಹಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ನಿರಂಜನ್ ಹಿರೇಮಠ ಕುಟುಂಬಕ್ಕೆ ಸೂಕ್ತ ರಕ್ಷಣೆಯನ್ನು ಕೊಡುತ್ತೇವೆ. ಪ್ರಕರಣದಲ್ಲಿ ಬೇರೆ ಯಾರಾದರೂ ಇದ್ದಾರೆ? ಎಂಬಿತ್ಯಾದಿ ಆಯಾಮಗಳಲ್ಲೂ ತನಿಖೆ ಮಾಡಲು ಸೂಚಿಸಿದ್ದೇನೆ ಎಂದು ಅವರು ಮಾಹಿತಿ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರ ಭೇಟಿ ನಂತರ ಮಾತನಾಡಿದ ನೇಹಾ ತಂದೆ ನಿರಂಜನ್ ಹಿರೇಮಠ ಅವರು, ಮುಖ್ಯಮಂತ್ರಿಗಳ ಬಳಿಕ ಮಗಳ ಸಾವಿಗೆ ನ್ಯಾಯ ಕೇಳಿದ್ದೇನೆ. ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸುವಂತೆಯು ಅವರನ್ನು ಕೋರಲಾಗಿದೆ ಎಂದು ಹೇಳಿದರು.
ಸರ್ಕಾರ ನಮ್ಮ ಬೆನ್ನಿಗೆ ಇರಬೇಕು ಎಂದು ಅವರು ಕೋರಿದರು. ಮುಖ್ಯಮಂತ್ರಿಗಳು ನಮ್ಮ ಜೊತೆಗೆ ಇದ್ದುಕೊಂಡು ನ್ಯಾಯ ಕೊಡಿಸಬೇಕು. ಮಗಳ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಟ್ಟಿದ್ದು ಸಂತೋಷ ತಂದಿದೆ. ಕಾಂಗ್ರೆಸ್ ಮುಖಂಡರೆಲ್ಲ ನನ್ನ ಬೆನ್ನಿಗೆ ನಿಂತಿದ್ದಾರೆ.