ವಿಜಯಪುರ: ರಾಜ್ಯಾಧ್ಯಕ್ಷರಾಗುವ ತನಕ ವಿಜಯೇಂದ್ರ ಪಕ್ಷಕ್ಕಾಗಿ ಏನು ಮಾಡಿಲ್ಲ. ಅವರು ಬರೀ ಕಲೆಕ್ಷನ್ ಮಾಸ್ಟರ್. ವಿಜಯೇಂದ್ರ ತನ್ನ ಅಪ್ಪ ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ ಮಹಾನ್ ನಾಯಕ ಎಂದು ಯತ್ನಾಳ್ ಗುಡುಗಿದರು.
ಬಿಎಸ್ ಯಡಿಯೂರಪ್ಪ ಅವರು ಜೈಲಿಗೆ ಹೋಗಲು ಕಾರಣವೇ ಇಂದಿನ ರಾಜ್ಯಾಧ್ಯಕ್ಷರು. ಧೀಮಂತ ಪೂಜ್ಯ ತಂದೆಯನ್ನು ಜೈಲುಗಿ ಕಳುಹಿಸಿದ ಮಹಾನ್ ನಾಯಕ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶನಿವಾರ ಮತ್ತೆ ಬಿವೈ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ರಮೇಶ್ ಜಾರಕಿಹೊಳಿ ನಾಲಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ವಿಜಯೇಂದ್ರ ತಾಕೀತು ಮಾಡಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಯತ್ನಾಳ್, ರಮೇಶ್ ಜಾರಕಿಹೊಳಿ 17 ಶಾಸಕರನ್ನು ಕರೆದುಕೊಂಡು ಬರದಿದ್ದರೆ ಯಡಿಯೂರಪ್ಪ ಸಿಎಂ ಆಗುತ್ತಿದ್ದರಾ? ಯಡಿಯೂರಪ್ಪ ಸಿಎಂ ಆಗಲು ಮುಖ್ಯ ಕಾರಣವೇ ರಮೇಶ್ ಜಾರಕಿಹೊಳಿ. ನೀವು ಇಷ್ಟೆಲ್ಲಾ ದುಡ್ಡು ಮಾಡಲು ಕಾರಣ ರಮೇಶ್ ಜಾರಕಿಹೊಳಿ. ಎಷ್ಟು ದುಡ್ಡು ಮಾಡಿದ್ದೀರಿ ಎಂದು ಜಗತ್ತಿಗೆ ಗೊತ್ತಿದೆ’ ಎಂದು ತಿರುಗೇಟು ನೀಡಿದರು.
ಚೆನ್ನಾಗಿ ಕೆಲಸ ಮಾಡುತ್ತಿದ್ದ ರಮೇಶ್ ಜಾರಕಿಹೊಳಿಯನ್ನು ಬಲಿ ಕೊಟ್ಟವರು ಯಾರು? ಇದರಲ್ಲಿ ವಿಜಯೇಂದ್ರರ ಪಾತ್ರವೇನು ಅಂತ ನನಗೆ ಚೆನ್ನಾಗಿ ಗೊತ್ತಿದೆ ಎಂದು ಯತ್ನಾಳ್ ಹೇಳಿದರು.
ಯಡಿಯೂರಪ್ಪ ಒಬ್ಬರೇ ಸೈಕಲ್ ತುಳಿದು ಪಕ್ಷ ಕಟ್ಟಿದ್ದಲ್ಲ. ಸೈಕಲ್ ನಾವು ಕೂಡಾ ಹೊಡೆದಿದ್ದೇವೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆದರು. ವಿರೋಧ ಪಕ್ಷದ ನಾಯಕನಾಗಿದ್ದಾರೆ, ಸೋತಾಗ ವಿಧಾನ ಪರಿಷತ್ ಸದಸ್ಯ ಮಾಡಲಾಗಿದೆ. ಸಂಸದರನ್ನಾಗಿ ಮಾಡಲಾಗಿದೆ ಎಂದರು.