ಪ್ರಧಾನಿ ಮೋದಿ ಕೈಯಲ್ಲಿ ದೇಶದ ಪ್ರಜಾಪ್ರಭುತ್ವ,ಕಂಟಕ ಸಂವಿಧಾನ ಸುರಕ್ಷಿತವಾಗಿಲ್ಲ  : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಪ್ರಧಾನಿ ಮೋದಿ ಕೈಯಲ್ಲಿ ದೇಶದ ಪ್ರಜಾಪ್ರಭುತ್ವ,ಕಂಟಕ  ಸಂವಿಧಾನ ಸುರಕ್ಷಿತವಾಗಿಲ್ಲ  :  ಸಿಎಂ ಸಿದ್ದರಾಮಯ್ಯ ವಾಗ್ದಾಳಿ

 

ಮೈಸೂರು: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಚುನಾವಣೆಯಲ್ಲಿ ಸೋಲುವ ಭಯ ಉಂಟಾಗಿದೆ.ಪ್ರಧಾನಿ ಮೋದಿ ಮತ್ತು ಬಿಜೆಪಿಯವರು ಹಿಟ್ಲರ್‌, ಮುಸಲೋನಿ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರು. ಮೋದಿ ಅವರ ಕೈಯಲ್ಲಿ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಸುರಕ್ಷಿತವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ಎರಡೂ ಪಕ್ಷಗಳಿಗೆ ತತ್ವ, ಸಿದ್ಧಾಂತ ಇಲ್ಲ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನೂ ರೂಪಿಸಿಕೊಂಡಿಲ್ಲ. ಕಾಂಗ್ರೆಸ್‌ ಸೋಲಿಸುವುದೊಂದೇ ಅವರ ಗುರಿ. ಬಡವರು, ರೈತರು, ಅಲ್ಪಸಂಖ್ಯಾತರು, ಮಹಿಳೆಯರ ಪರವಾಗಿ ಏನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವರಿಗೆ ಯಾವುದೇ ಸಾಧನೆಗಳಿಲ್ಲ ಎಂದು ವ್ಯಂಗ್ಯವಾಡಿದರು.

ಕೊಳ್ಳೇಗಾಲದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಂವಿಧಾನವನ್ನು ಬದಲಿಸುತ್ತೇವೆಂದು ಬಿಜೆಪಿ ಹೇಳುತ್ತಿದೆ. ದೇಶದಲ್ಲಿಂದು ಸಂವಿಧಾನವು ಅಪಾಯದಲ್ಲಿದೆ. ಪ್ರಧಾನಿ ಪ್ರಜಾಪ್ರಭುತ್ವದ ವಿರುದ್ಧದ “ಸರ್ವಾಧಿಕಾರಿ” ಆಗಿ ಬದಲಾಗಿದ್ದಾರೆ. ಹೀಗಾಗಿ, ಜನರು ಬಿಜೆಪಿ ಹಾಗೂ ಮೋದಿಯವರನ್ನು ಮತದಾರರು ತಿರಸ್ಕರಿಸಬೇಕು ಎಂದು ಹೇಳಿದರು.

ಮೋದಿ ಅವರು 10 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ. ಪ್ರಧಾನಿಯಾಗುವುದಕ್ಕೂ ಮುಂಚೆ ಅವರು ಬಹಳಷ್ಟು ಹೇಳಿಕೊಂಡಿದ್ದರು. ಆದರೆ, 10 ವರ್ಷಗಳಲ್ಲಿ ಅದನ್ನು ಹೇಳಿದಂತೆ ಮಾಡಿದ್ದಾರೆಯೇ ಎಂಬುದನ್ನು ಜನರು ಪರಿಶೀಲಿಸಬೇಕು. ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದರು. ಖಾತೆಗೆ ರೂ.15 ಲಕ್ಷ ಹಾಕುವಾಗಿ ಘೋಷಿಸಿದ್ದರು. ಕಪ್ಪು ಹಣ ಬಂತಾ? ಖಾತೆಗೆ ಜಮೆ ಆಯಿತಾ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಅದರಂತೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ 20 ಲಕ್ಷವೂ ಆಗಿಲ್ಲ. ಅಚ್ಚೇ ದಿನ್‌ ಬರುತ್ತದೆ ಎಂದಿದ್ದರು. 10 ವರ್ಷಗಳಲ್ಲಿ ಬಂತಾ? ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌ ಎಂದು ಘೋಷಿಸಿದ್ದರು. ಆದರೆ, ಬಡವರು ಅಭಿವೃದ್ಧಿಯಾಗಲಿಲ್ಲ. ಅಂಬಾನಿ, ಅದಾನಿ, ಟಾಟಾ, ಬಿರ್ಲಾಗಳು ಅಭಿವೃದ್ಧಿ ಹೊಂದಿದರು’ ಎಂದು ಕಿಡಿಕಾರಿದರು

ಸ್ವಾಮಿನಾಥನ್‌ ವರದಿ ಜಾರಿಗೆ ತರಲಿಲ್ಲ. ಪೆಟ್ರೋಲ್‌, ಡೀಸೆಲ್‌ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಾಗಿದೆ. ರೈತರ ಆದಾಯ ದುಪ್ಪಟ್ಟು ಮಾಡುವ ಹೇಳಿಕೆಯೂ ಸುಳ್ಳಾಗಿದೆ. 10 ವರ್ಷಗಳ ಅವಧಿಯಲ್ಲಿ ಮೋದಿ ಪ್ರಧಾನಿಯಾಗಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಮತ್ತೆ 10 ವರ್ಷ ಪ್ರಧಾನಿಯಾಗಲು ಹೊರಟಿದ್ದಾರೆ. ಇಂತಹವರಿಗೆ ಮತ ಹಾಕಬೇಕಾ? ಬಿಜೆಪಿ ಯಾವಾಗಲೂ ನುಡಿದಂತೆ ನಡೆದಿಲ್ಲ. ಹಾಗಾಗಿ, ಬಿಜೆಪಿಗೆ ಮತ ಹಾಕಬೇಡಿ ಎಂದು ಕರೆ ನೀಡಿದರು.

ಎಸ್ಸಿ ಮತ್ತು ಎಸ್ಟಿಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ದಲಿತರಿಗೆ ಗುತ್ತಿಗೆ ಮತ್ತು ಬಡ್ತಿಯಲ್ಲಿ ಮೀಸಲಾತಿಯನ್ನು ತಂದಿದ್ದು ಕಾಂಗ್ರೆಸ್ ಸರ್ಕಾರ ಎಂಬುದನ್ನು ದಲಿತರು ತಿಳಿದುಕೊಳ್ಳಬೇಕು ಎಂದರು.

ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಏನೂ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಹೇಳಿಕೊಳ್ಳುವುದಕ್ಕೇ ಸಾಧನೆಗಳೇ ಇಲ್ಲ. ಮೋದಿ ಬಿಟ್ಟರೆ ಚುನಾವಣಾ ವಿಷಯಗಳೇ ಇಲ್ಲ. ಮೋದಿ ಅವರ ಮುಖವಾಡ ಇಟ್ಟುಕೊಂಡು ‘ಮೋದಿಗೆ ಮತ‌ ಕೊಡಿ’ ಎಂದು ಕೇಳುತ್ತಿದ್ದಾರೆಂದು ಕುಟುಕಿದರು.