ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಜನಪ್ರತಿನಿಧಿಗಳ ಸನ್ಮಾನ, ಗಮನ ಸೆಳೆದ ಸಂವಾದ ಕಾರ್ಯಕ್ರಮ

ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಜನಪ್ರತಿನಿಧಿಗಳ ಸನ್ಮಾನ, ಗಮನ ಸೆಳೆದ ಸಂವಾದ ಕಾರ್ಯಕ್ರಮ

 

ಬೆಳಗಾವಿ: ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ವಾರ್ತಾ ಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮ ಹಲವು ಗಂಭೀರ ವಿಷಯಗಳ ಮೇಲೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಯಿತು.
ಸಂವಾದದಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಪಶ್ನೆಗಳಿಗೆ ಉತ್ತರಿಸಿ, ಸಂಭವನೀಯ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಅಲ್ಲದೇ, ಶೇ.88ರಷ್ಟು ಪಂಪ್ ಸೆಟ್ ಅಳವಡಿಕೆ ಕಾರ್ಯಕ್ರಮವೂ ಪೂರ್ಣಗೊಂಡಿದೆ. ಹಲವೆಡೆ ಇರುವ ಕೊಳವೆಬಾವಿಗಳನ್ನು ಪುನಶ್ಚೇತನಗೊಳಿಸಲಾಗಿದೆ ಎಂದರು.
ಅಲ್ಲದೇ, ಒಟ್ಟಾರೆಯಾಗಿ 2057ರ ಜನಸಂಖ್ಯೆಯನ್ನು ಆಧರಿಸಿ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗಿದೆ. ಮುಂಬರುವ ಎರಡ್ಮೂರು ವರ್ಷಗಳಲ್ಲಿ ಬಹುತೇಕ ವಾರ್ಡ್ ಗಳಲ್ಲಿ ನಿರಂತರ ನೀರು ಪೂರೈಕೆಯ ಯೋಜನೆಯ ಸಂಪರ್ಕಗಳನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಇನ್ನು, ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಾಪೌರ ಮಂಗೇಶ್ ಪವಾರ ಅವರು, ಸದ್ಯಕ್ಕೆ ಮಹಾನಗರದಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಿಲ್ಲ. ಕಳೆದ ಬಾರಿಗಿಂತಲೂ ಈ ಬಾರಿ ನೀರಿನ ಲಭ್ಯತೆ ಸಮರ್ಪಕವಾಗಿದೆ. ಆದರೆ, ವಿದ್ಯುತ್ ಸಮಸ್ಯೆ, ತಾಂತ್ರಿಕ ದೋಷ ಹಾಗೂ ಅಭಿವೃದ್ಧಿ ಕಾಮಗಾರಿಗಳಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಅಲ್ಲದೇ, ಉತ್ತರ ಮತ್ತು ದಕ್ಷಿಣ ಮತಕ್ಷತ್ರಗಳಿಗೆ ತಲಾ ಹದಿನಾಲ್ಕು ಟ್ಯಾಂಕರ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸಂವಾದದಲ್ಲಿ ಇ-ಖಾತಾ, ಕಟ್ಟಡ ಪರವಾನಿಗೆ ಸಮಸ್ಯೆ, ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲಾಯಿತು. ಅಲ್ಲದೇ, ಸಮಸ್ಯೆಗಳ ಪರಿಹಾರಕ್ಕೆ ಶಾಸಕರು, ಮಹಾಪೌರರು, ಉಪಮಹಾಪೌರರು ಭರವಸೆಯನ್ನೂ ನೀಡಿದರು.
ಬಾಕ್ಸ್…..
ಜಾತಿ, ಭಾಷೆ ಮೀರಿ ಅಭಿವೃದ್ದಿಗೆ ಒತ್ತು….
ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಮಹಾನಗರದ ಅಭಿವೃದ್ಧಿಗೆ ನಾವು ಕಂಕಣಬದ್ಧರಾಗಿದ್ದೇವೆ. ಜಾತಿ, ಭಾಷೆ, ಭೇದಭಾವವನ್ನು ಮರೆತು ಅಭಿವೃದ್ಧಿ ಒತ್ತು ನೀಡಲಾಗಿದೆ. ಇಂತಹ ಸಂವಾದ ಕಾರ್ಯಕ್ರಮಗಳಿಂದ ನಮಗೆ ಜನರಿಗೆ ಸಮರ್ಪಕವಾಗಿ ಮೂಲಸೌಲಭ್ಯ ಒದಗಿಸಲು ಇಂತಹ ಸಂವಾದ ಕಾರ್ಯಕ್ರಮ ಸಹಕಾರಿಯಾಗಲಿವೆ.
-ಮಂಗೇಶ ಪವಾರ,
ಮೇಯರ್

ಸಹಕಾರ ಮುಖ್ಯ….
ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ನಾವು ಮಹಾನಗರದ ಎಲ್ಲ ವಾರ್ಡ್ ಗಳ ಸಮಗ್ರ ಅಭಿವೃದ್ದಿಗೆ ಮುಂದಾಗಿದ್ದೇವೆ. ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಜನತೆಗೆ ತಲುಪಿಸಲು ಮಾಧ್ಯಮದ ಸಹಕಾರವೂ ಅಗತ್ಯವಾಗಿದೆ. ಎಲ್ಲರೂ ಮಹಾನಗರದ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣ.
-ವಾಣಿ ವಿಲಾಸ ಜೋಶಿ, ಉಪಮೇಯರ್

 

ಪಕ್ಷಭೇದ ಮರೆತು ಅಭಿವೃದ್ಧಿಗೆ ಶ್ರಮಿಸಿ…..
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ನೂತನವಾಗಿ ಆಯ್ಕೆಯಾದ ಮೇಯರ್ ಮಂಗೇಶ್ ಪವಾರ, ಉಪಮಹಾಪೌರರಾದ ವಾಣಿ ವಿಲಾಶ ಜೋಶಿ ಅವರನ್ನು ಬೆಳಗಾವಿ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಅಭಯ ಪಾಟೀಲ, ನೀವು ಕೇವಲ ಬಿಜೆಪಿ ನಗರಸೇವಕರ ವಾರ್ಡ್ ಗಳಷ್ಟೇ ಅಲ್ಲ, ಮಹಾನಗರದ ಎಲ್ಲ 58 ವಾರ್ಡ್ ಗಳ ಸಮಗ್ರ ಅಭಿವೃದ್ಧಿಗೆ ಪಕ್ಷಭೇದ ಮರೆತು ಶ್ರಮಿಸಬೇಕೆಂದು ಮೇಯರ್ ಹಾಗೂ ಉಪಮೇಯರ್ ಅವರಿಗೆ ಕಿವಿಮಾತು ಹೇಳಿದರು.
ರಾಜಕಾರಣವನ್ನು ದೂರವಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದ ಅವರು, ರಾಜಕಾರಣಿಗಳನ್ನು ಹೊಗಳಿದರೆ ಅಭಿವೃದ್ಧಿ ಆಗುವುದಿಲ್ಲ. ರಾಜಕಾರಣಿಗಳ ತಪ್ಪುಗಳ ಮೇಲೆಯೂ ಬೆಳಕು ಚೆಲ್ಲುವ ಮೂಲಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಪತ್ರಕರ್ತರಿಗೆ ಸಲಹೆ ನೀಡಿದರು.
ಮೇಯರ್ ಮಂಗೇಶ್ ಪವಾರ ಮಾತನಾಡಿ, ಸಮಸ್ಯೆಗಳನ್ನು ಬಗೆಹರಿಸಬೇಕೇ ಹೊರತು ಸಮಸ್ಯೆ ಉದ್ಭವಿಸಬಾರದು. ಆ ರೀತಿಯಲ್ಲಿ ಜಾತಿ, ಭಾಷೆಯನ್ನು ಮೀರಿ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.
ಉಪಮೇಯರ್ ವಾಣಿ ವಿಲಾಶ ಜೋಶಿ ಮಾತನಾಡಿದರು. ವಾರ್ತಾಧಿಕಾರಿ ಗುರುನಾಥ ಕಡಬೂರ ಅತಿಥಿಗಳಾಗಿ ಆಗಮಿಸಿದ್ದರು. ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಶ ಜೋಶಿ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ರವೀಂದ್ರ ಉಪ್ಪಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ  ಹಿರಿಯ ಪತ್ರಕರ್ತರಾದ. ರಾಜಶೇಖರ್ ಪಾಟೀಲ್. ಸಂಜಯ್ ಸೂರ್ಯವಂಶಿ.  ರಾಜು ಗೌಳಿ. ಚಂದ್ರಕಾಂತ್ ಸುಗಂಧಿ.   ನೌಶಾದ್ ವಿಜಾಪುರ.  ಮೈಬೂಬ್ ಮಾಕಂದರ್. ಶ್ರೀಶೈಲ್ ಮಠ. ಸುನಿಲ್ ಪಾಟೀಲ್. ಜಗದೀಶ್ ವಿರಕ್ತಮಠ. ಭೈರವ  ಕಾಂಬಳೆ. ಕುಂತಿನಾಥ್ ಕಲ್ಮನಿ. ಸುರೇಶ್ ನಿರಲಿ. ಮಂಜುನಾಥ್ ಪಾಟೀಲ್. ಶ್ರೀಕಾಂತ ಕುಬಕಟ್ಟಿ. ಶ್ರೀಧರ ಕೊಟ್ರರಗಸ್ತಿ.   ಶ್ರೀಮತಿ ಕೀರ್ತಿ ಕಾಸರ್ಗೋಡ. ಮಹೇಶ್ ವಿಜಾಪುರ್ .ಮಂಜುನಾಥ್ ಕೋಳಿಗುಡ್. ಅಶೋಕ್ ಮುದ್ದಣ್ಣವರ್. ಇಮಾಮ್ ಕೂಡಣ್ಣವರು. ಸಂತೋಷ್ ಚಿನ್ನ ಕುಡಿ. ರವಿ ಕೋಸಾವಿ. ರಾಮಚಂದ್ರ ಸುನಗಾರ್. ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.