ಸರಕಾರ ಹಾಗೂ ಲೋಕಾಯುಕ್ತಕ್ಕೆ ಸುಪ್ರೀಂಕೋರ್ಟ್ ಸೂಚಿಸಿದ್ದು ಏನು ?
ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ್ ಭ್ರಷ್ಟಾಚಾರದಿಂದ ಅಕ್ರಮ ಭೂ ಕಬಳಿಕೆಯ ಮತ್ತು ಚರಾಸ್ತಿ, ಚಿರಾಸ್ತಿ ಮೇಲೆ ತನಿಖೆ ಸಾಭಿತಾಗಿದ್ದು ಅವರ ಮೇಲೆ ಎಫ್ ಐಆರ್ ದಾಖಲಿಸಬೇಕೆಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರಕಾರ ಹಾಗೂ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ ಎಂದು
ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಆರೋಪಿಸಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ 12 ವರ್ಷಗಳ ಹಿಂದೆ ಆರಂಭಿಸಿರುವ ಈ ಹೋರಾಟದಲ್ಲಿ ಹೈಕೋರ್ಟ್ ನಲ್ಲಿ ನಮಗೆ ತಾಂತ್ರಿಕ ಕಾರಣದಿಂದ ನಮಗೆ ಹಿನ್ನಡೆಯಾಗಿತ್ತು. ಇದನ್ನು ನಾವು ಪ್ರಶ್ನಿಸಿ ಸುಪ್ರೀಂ ಕೋಟ್೯ಗೆ ಮೊರೆ ಹೋಗಿದ್ದೇವು. ಸುಪ್ರೀಂ ಕೋಟ್೯ ಈಗ ರಾಜ್ಯ ಸರಕಾರ ಹಾಗೂ ಲೋಕಾಯುಕ್ತಕ್ಕೆ ಶಾಸಕ ಅಭಯ ಪಾಟೀಲ್ ಮೇಲೆ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದ್ದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ವಿಪಕ್ಷ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೈಸೂರು ಪಾದಯಾತ್ರೆ ಮಾಡುತ್ತಾರೆ. ಆದರೆ ಬೆಳಗಾವಿಯಲ್ಲಿ ಬಿಜೆಪಿಯ ಶಾಸಕ ಅಭಯ ಪಾಟೀಲ್ ಅಕ್ರಮ ಭೂ ಕಬಳಿಕೆ ಮಾಡಿರುವ ಕುರಿತು ಸುಪ್ರೀಂ ಕೋರ್ಟ್ ಸರಕಾರಕ್ಕೆ ಹಾಗೂ ಲೋಕಾಯುಕ್ತಕ್ಕೆ ಎಫ್ಐಆರ್ ದಾಖಲಿಸಬೇಕು ಎಂದು ಸೂಚನೆ ನೀಡಿದ್ದಾರೆ. ಬೆಂಗಳೂರಿನಿಂದ ಬೆಳಗಾವಿಗೆ ಪಾದಯಾತ್ರೆ ಮಾಡಲಿ ಎಂದು ಆಗ್ರಹಿಸಿದರು.
ರಾಜಕುಮಾರ ಟೋಪಣ್ಣವರ ಮಾತನಾಡಿ, ಬೆಳಗಾವಿಯ ಸಂಸದ ಜಗದೀಶ್ ಶೆಟ್ಟರ್ ಅವರು ಮೈಸೂರಿನ ಮುಡಾ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಬೆಳಗಾವಿಯಲ್ಲಿ ಅವರ ಪಕ್ಷದ ಶಾಸಕ ಅಭಯ ಪಾಟೀಲ್ ಅವರು ಮಾಡಿರುವ ಭ್ರಷ್ಟಾಚಾರದ ಕುರಿತು ಧ್ವನಿ ಎತ್ತಬೇಕು. ಇವರು ತಮಗೆ ಬೇಕಾದವರ ರಕ್ಷಣೆ ಮಾಡುವುದು, ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ನಿತಿನ್ ಬೋಳಬಂದಿ ಉಪಸ್ಥಿತರಿದ್ದರು.