This is the title of the web page
This is the title of the web page

ಬಿಜೆಪಿ ಸುಳ್ಳಿನ ಪಕ್ಷ,ಕೇಂದ್ರದಿಂದ ತಾರತಮ್ಯ’: ಸದನದಲ್ಲಿ ಸಿದ್ದರಾಮಯ್ಯ ಗುಡುಗು

ಬಿಜೆಪಿ ಸುಳ್ಳಿನ ಪಕ್ಷ,ಕೇಂದ್ರದಿಂದ ತಾರತಮ್ಯ’: ಸದನದಲ್ಲಿ ಸಿದ್ದರಾಮಯ್ಯ ಗುಡುಗು

 

ಬೆಂಗಳೂರು:ಬಿಜೆಪಿ ಸುಳ್ಳಿನ ಪಕ್ಷ ಸುಳ್ಳು ಹೇಳುವುದು ಬಿಜೆಪಿಯವರು, ನಾವಲ್ಲ, ಸುಳ್ಳು ಹೇಳುವುದು ಬಿಜೆಪಿಯವರಿಗೆ ಕರಗತವಾಗಿದೆ, ಇದು ರಾಜ್ಯದ ಜನತೆಗೆ ಕೂಡ ಅರ್ಥವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಇಂದು ಮಂಗಳವಾರ ವಿಧಾನಸಭೆಯ ಬಜೆಟ್​ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಅವರು, ನಾವು ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದೇವೆ ಎಂಬುದಾಗಿ ಬಿಜೆಪಿಯವರು ಆರೋಪ ಮಾಡಿದ್ದಾರೆ.

ರಾಜ್ಯಪಾಲರ ಭಾಷಣ ನೀರಸ ಭಾಷಣ ಎಂದು ಆರೋಪಿಸಿದ್ದಾರೆ. ರಾಜ್ಯಪಾಲರು ಒಳ್ಳೆಯವರು. ಅವರ ಬಾಯಿಂದ ನೀವು ಏನೇನೋ ಹೇಳಿಸಿದಿರಿ ಎಂದು ಮಾಜಿ ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ. ಆದರೆ, ರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಯವರು ಹೇಳುತ್ತಿರುವುದು ಸುಳ್ಳು ಅಂತ ಜನರಿಗೆ ಅರ್ಥವಾಗಿದೆ. ಬಿಜೆಪಿ ಸುಳ್ಳಿನ ಪಕ್ಷ ಎಂದರು. ಇದೇ ವೇಳೆ, ಮಧ್ಯ ಪ್ರವೇಶಿಸಿದ ಬೊಮ್ಮಾಯಿ, ನಮ್ಮದು ಸುಳ್ಳಿನ ಪಕ್ಷವಾದ್ರೆ, ಕಾಂಗ್ರೆಸ್ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ನಿಮ್ಮನ್ನು ಕೆಣಕಲು ಹೋಗಲ್ಲ. ನಾವೇನು ಅಂತ ಜನ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದರು.

ಕೇಂದ್ರ ಸರ್ಕಾರಕ್ಕೆ 17 ಪತ್ರಗಳನ್ನು ಬರೆದಿದ್ದೆವು. ಅದರಲ್ಲಿ ಒಂದು ಪತ್ರಕ್ಕೆ ಮಾತ್ರ ಅಮಿತ್ ಶಾ, ‘ನಿಮ್ಮ ಪತ್ರ ತಲುಪಿದೆ’ ಎಂದು ಉತ್ತರಿಸಿದ್ದರು. ಬೇರೆ ಯಾವ ಪತ್ರಗಳಿಗೂ ಉತ್ತರ ನೀಡಿಲ್ಲ ಎಂದು ಸಿಎಂ ಹೇಳಿದರು.

ಜನ ತೀರ್ಪು ಕೊಟ್ಟಾಗಿದೆ. ಬಿಜೆಪಿಯವರನ್ನು ವಿರೋಧ ಪಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದಾಗ, ಕಳೆದ ಸಲ ಜನ ನಿಮ್ಮನ್ನು ವಿಪಕ್ಷ ಸ್ಥಾನದಲ್ಲಿ ಕೂರಿಸಿರಲಿಲ್ವಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದರು. ಕೂಡಲೇ ಸಿದ್ದರಾಮಯ್ಯ, ಅದನ್ನು ನಾನು ಒಪ್ಕೊಂಡಿದ್ದೇನೆ. 2018 ರಲ್ಲಿ ಜನರ ತೀರ್ಪು ತಲೆಬಾಗಿ ಒಪ್ಕೊಂಡಿದ್ದೇವೆ, ಈಗ ನೀವೂ ಒಪ್ಪಿಕೊಳ್ಳಿ ಎಂದರು.ಇದಕ್ಕೆ ಬಿಜೆಪಿ ಶಾಸಕರು ಅಂಕಿಅಂಶ ಬಹಿರಂಗಪಡಿಸಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಿಎಂ, ನಾನು ತಪ್ಪು ಹೇಳಿಲ್ಲ, ತಪ್ಪು ಹೇಳಿದ್ರೆ ತೆಗೆಸಿ ಎಂದು ಪ್ರತಿ ಸವಾಲು ಹಾಕಿದರು.

ಕಾಂಗ್ರೆಸ್ ಸಂಸದ ಡಿಕೆ ಸುರೇಶ್​ ದೇಶವಿಭಜನೆ ಹೇಳಿಕೆ ಬಗ್ಗೆ ಬಿಜೆಪಿ ನಾಯಕರು ತೆಗೆದಿರುವ ತೀವ್ರ ವಿವಾದವನ್ನು ಸದನದಲ್ಲಿ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಮೋದಿ ಗುಜರಾತ್​ ಸಿಎಂ ಆಗಿದ್ದಾಗ ಏನು ಹೇಳಿದ್ದರು ಎಂದು ಪ್ರಶ್ನಿಸಿದರು. ಇದೇ ವೇಳೆ, ವಿಧಾನಸಭೆಯಲ್ಲಿ ಆಡಳಿತ-ವಿಪಕ್ಷ ಸದಸ್ಯರ ಗದ್ದಲ ಜೋರಾಯಿತು. ಮೋದಿ ಅವರ ಅಂದಿನ ಹೇಳಿಕೆಯನ್ನು ಸಿದ್ದರಾಮಯ್ಯ ಓದಿ ಹೇಳಿದರು. ನಮ್ಮ ಸಂಸದರಿಗೆ ಧೈರ್ಯ ಇಲ್ವಾ? ಮೋದಿ ಬಳಿ ಹೋಗಿ ಕೇಳುವುದಕ್ಕೆ ಧೈರ್ಯ ಇಲ್ವಾ ಎಂದು ಪ್ರಶ್ನಿಸಿದರು.