ಬೆಳಗಾವಿ: ಕರ್ನಾಟಕದಲ್ಲಿರುವುದು ಕಳ್ಳ ಸರ್ಕಾರ. ಈ ಬಿಜೆಪಿ ಸರ್ಕಾರವನ್ನು ಜನರು ಆಯ್ಕೆ ಮಾಡಿದಲ್ಲ. ಶಾಸಕರನ್ನು ಹಣದಿಂದ ಖರೀದಿಸಿ ಸರ್ಕಾರ ರಚಿಸಿ, ಪ್ರತಿ ಸರ್ಕಾರಿ ಕೆಲಸದಲ್ಲೂ 40 % ಕಮಿಷನ್ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಯಮಕನಮರಡಿ ಮತಕ್ಷೇತ್ರದ ಭೂತರಾಮನಹಟ್ಟಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ 40 % ಸರ್ಕಾರ ಎಂದು ಕರೆಯಬೇಕು. ಗುತ್ತಿಗೆದಾರರ ಸಂಘಟನೆ ಅಧ್ಯಕ್ಷರು ಕರ್ನಾಟಕದಲ್ಲಿ ನಡೆಯುತ್ತಿರುವ 40 % ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಪ್ರತ್ಯುತ್ತರ ಕೊಟ್ಟಿಲ್ಲ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ಪ್ರಧಾನಿಯವರು ರಾಜ್ಯದಲ್ಲಿ ತಮ್ಮದೇ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಬಗ್ಗೆ ಮೌನ ವಹಿಸಿದ್ದಾರೆಂದು ಟೀಕಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕಳೆದ ಮೂರು ವರ್ಷದಿಂದ ಬಿಜೆಪಿ ಸರ್ಕಾರ 40 % ಕಮಿಷನ್ ಪಡೆದಿದೆ. ಬಿಜೆಪಿಗೆ 40ರ ಸಂಖ್ಯೆ ತುಂಬ ಇಷ್ಟವಿದ್ದು, 40ರ ಸಂಖ್ಯೆಯ ಮೇಲೆ ಅವರಿಗೆ ಪ್ರೀತಿ ಇದೆ. ಹೀಗಾಗಿ, ಬಿಜೆಪಿಗೆ ಈ ಚುನಾವಣೆಯಲ್ಲಿ ಕರ್ನಾಟಕದ ಜನರು 40 ಸೀಟುಗಳನ್ನು ಮಾತ್ರ ನೀಡಬೇಕು. ಕಾಂಗ್ರೆಸ್‌ಗೆ ಕಡಿಮೆ ಎಂದರೂ 150 ಸೀಟುಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಕನ್ನಡಿಗರ ಕಷ್ಟದ ದಿನಗಳಲ್ಲಿ ಪ್ರಧಾನಿ ಅವರು ಬರಲ್ಲ. ಆದರೆ ಈಗ ಮತ ಕೇಳಲು ಬರುವುದು ವಿಪರ್ಯಾಸ, ಯುವಕರ ಭವಿಷ್ಯದ ಬಗ್ಗೆ ಆಸೆ ತೋರಿಸಿ, ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇನೆ ಎಂದು ಹೇಳಿ ಉದ್ಯೋಗ ಸೃಷ್ಟಿ ಮಾಡಲಿಲ್ಲ, ನಾವು ಸುಳ್ಳು ಭರವಸೆ ನಿಡುವುದಿಲ್ಲ, ಅಧಿಕಾರ ನೀಡಿ ನೋಡಿ. 2.5 ಲಕ್ಷ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ಅಧಿಕಾರ ಪಡೆದು ದೇಶ, ರಾಜ್ಯವನ್ನು ಲೂಟಿ ಮಾಡುತ್ತಿದೆ. ಭಯೋತ್ಪಾದನೆ ಬಗ್ಗೆ ಮಾತನಾಡುವ ಬಿಜೆಪಿಗರು ಮಾಡಿದ್ದೇನು..? ಇಂತವರ ಭಯೋತ್ಪಾದನೆಯಿಂದ ನನ್ನ ತಂದೆ, ನನ್ನ ಅಜ್ಜಿಯನ್ನು ಕಳೆದುಕೊಂಡಿದ್ದೇನೆ, ಭಯೋತ್ಪಾದನೆಯಿಂದ ನಮ್ಮ ಕುಟುಂಬ, ನಾನು ನೋವು ಅನುಭವಿಸಿದ್ದೇವೆ ಎಂದರು.
ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದ ಹಣವನ್ನು, ರೈತರ, ಜನರ, ಬಡವರಿಗೆ ನೀಡುವುದೇ ಕಾಂಗ್ರೆಸ್ ಪಕ್ಷದ ಗುರಿಯಾಗಿದ್ದು, ಅದಕ್ಕಾಗಿಯೇ ನಾವು ಇಂದು ಚುನಾವಣೆ ಮುಂಚೆಯೇ ಐದು ಗ್ಯಾರಂಟಿಗಳನ್ನು ನೀಡಿದ್ದು, ನಾನು ಅಧಿಕಾರಕ್ಕೆ ಬಂದ ಐದು ದಿನಗಳಲ್ಲಿ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಅವುಗಳಿಂದ ಜನ ಕಲ್ಯಾಣ ಹೇಗೆ ಆಗುತ್ತೆ ಎಂಬುವುದನ್ನು ನೀವೇ ಮುಂದೆ ನೋಡುವಿರಿ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿಯವರು ಜನ ಸಾಮಾನ್ಯರ, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದವರ ಬಗ್ಗೆ ಕಳಕಳಿ ಇರುವ ನಾಯಕ. ಇಂತ ನಾಯಕ, ನಿಮ್ಮ ಸಮಸ್ಯೆ ಗೆ ಸದಾ ಸ್ಪಂದಿಸುವ ಸತೀಶ್ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕೆಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಕಳೆದ 3 ಭಾರಿ ಯಮಕನಮರಡಿ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ನಿಮಗೆ ಧನ್ಯವಾದಗಳು, ಈ ಚುನಾವಣೆಯಲ್ಲಿಯೂ ಆಶೀರ್ವಾದ ಮಾಡುತ್ತೀರಿ ಅನ್ನೋ ನಂಬಿಕೆ ನನಗಿದೆ. 15 ವರ್ಷಗಳ ಹಿಂದೆ ಈ ಕ್ಷೇತ್ರ ಹೇಗಿತ್ತು ಅನ್ನೋದು ನಿಮಗೆ ಗೊತ್ತಿದೆ, ಆದರೆ ಈಗ ಎಷ್ಟು ಅಭಿವೃದ್ಧಿ ಹೊಂದಿದೆ ಎಂದು ಎಲ್ಲರನ್ನೂ ಕೇಳಿ. ನಮ್ಮ ವಿರೋಧಿಗಳಿಗೆ ಚಾಲೆಂಜ್ ಮಾಡ್ತೀನಿ, ನಾವು ಈ ಚುನಾವಣೆಯಲ್ಲಿ ಟಾಪ್ ಟೆನ್ ಅಲ್ಲಿ ಆಯ್ಕೆ ಆಗುತ್ತೇನೆ, ಅದಕ್ಕೆ ನಿಮ್ಮ ಗ್ಯಾರಂಟಿ ಬೇಕು ಎಂದರು.
ಈಗಾಗಲೇ ನಾವು ಸರ್ವೇ ಮಾಡಿದ್ದು, ಸರ್ವೇಯಲ್ಲಿ ನಾವೇ ಮುಂದೆ ಇದ್ದೇವೆ, ಇನ್ನೂ ಕೇವಲ ನಾಲ್ಕು ದಿನ ಅಷ್ಟೇ ಸಮಯ ಇದೆ. ನನ್ನನ್ನು ಯಾವ ರೀತಿ ಆಯ್ಕೆಮಾಡಬೇಕೆಂದರೆ ನಮ್ಮ ವಿರೋಧಿಗಳು ಇನ್ನು ಇಪ್ಪತ್ತು ವರ್ಷ ನಮ್ಮ ಹತ್ತಿರ ಬರಬಾರದು ಎಂದರು.
ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಕ್ಷೇತ್ರದ ಜನರ ಕೆಲಸ, ಕಾರ್ಯ, ಸೇವೆಯನ್ನು ಪ್ರಾಮಾಣಿಕಯಿಂದ ಮಾಡಿದ್ದ ತಂದೆ, ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಮತ್ತೊಮ್ಮೆ ಭಾರಿ ಅಂತರದಿಂದ ಗೆಲ್ಲಿಸಬೇಕು. ವಿರೋಧ ಪಕ್ಷದ ನಾಯಕರು ಚುನಾವಣೆ ಬಂದಾಗ ಅಷ್ಟೇ ನಿಮ್ಮ ಮನೆಗೆ ಬರುತ್ತಾರೆ. ಇಂತಹ ವ್ಯಕ್ತಿಗಳನ್ನು ನಂಬಬೇಡಿ. ರಾಹುಲ್ ಗಾಂಧೀಜಿ ಅವರು ಹೇಳಿದ ಹಾಗೆ ಬಿಜೆಪಿಗೆ 40 ಸೀಟು ಮಾತ್ರ ನೀಡಬೇಕು. ಅದೇ ರೀತಿ ಯಮಕನಮರಡಿಯಲ್ಲಿ ವಿರೋಧ ಪಕ್ಷದವರು 40 ಸಾವಿರ ಮತಗಳನ್ನು ಮೀರಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ವೀರಕುಮಾರ್ ಪಾಟೀಲ್, ಬೆಳಗಾವಿ ಉತ್ತರ ಮತಕ್ಷೇತ್ರದ ಅಭ್ಯರ್ಥಿ ಆಸೀಫ್ (ರಾಜು) ಸೇಠ್, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ಅರುಣ ಕಟಾಂಬಳೆ, ಸಿದ್ದು ಸುಣಗಾರ್, ಸಿದ್ದಿಕ್ ಅಂಕಲಗಿ, ಕಿರಣ ರಜಪೂತ್, ಯಮಕನಮರಡಿ ಮತಕ್ಷೇತ್ರದ ಜಿಪಂ, ತಾಪಂ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.