ಹುಕ್ಕೇರಿ: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರನ್ನು ಬಂಧಿಸಿರುವ ಕ್ರಮ ಖಂಡಿಸಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು, ಕೋರ್ಟ್ ಸರ್ಕಲವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹಾಗೂ ಪೊಲೀಸರ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ವಾಹನ ಹಾಗೂ ಜನ ಸಂಚಾರಕ್ಕೆ ಅಡಚಣೆಯಾಯಿತು. ಯಾವುದೇ ಅಹಿತಕರ ಘಟನೆ ನಡೆದಂತೆ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.
ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಹೋರಾಟ ನಡೆಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮತ್ತು ಕನ್ನಡ ಹೋರಾಟಗಾರರನ್ನು ಬಂಧಿಸಿರುವುದು ಅತ್ಯಂತ ಖಂಡನೀಯವಾಗಿದೆ. ನಾಡು-ನುಡಿ, ನೆಲ-ಜಲ ರಕ್ಷಣೆಗಾಗಿ ಹೋರಾಟ ನಡೆಸುವವರನ್ನು ಹತ್ತಿಕ್ಕಲಾಗುತ್ತಿದೆ. ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪಟ್ಟಣದಲ್ಲಿ ಅಳವಡಿಸಿರುವ ಆಂಗ್ಲ, ಮರಾಠಿ ಭಾಷೆ ನಾಮಫಲಕಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಪ್ರತಿಭಟನಾಕಾರರು ತಹಶೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.
ತಾಲೂಕು ಅಧ್ಯಕ್ಷ ಪ್ರಮೋದ ಹೊಸಮನಿ, ಘಟಕ ಅಧ್ಯಕ್ಷ ಪ್ರಮೋದ ಕೂಗೆ, ಜಿಲ್ಲಾ ಸಂಚಾಲಕ ಮಹೇಶ ಹಟ್ಟಿಹೊಳಿ, ಮುಖಂಡರಾದ ರಾಮಚಂದ್ರ ರೆಂಗಟೆ, ಬಸು ಲೋಳಸೂರಿ, ಸಂತೋಷ ಸತ್ಯನಾಯಕ, ವಿನಾಯಕ ಕೋಳಿ, ರಾಬಿನ್ ಕೌಜಲಗಿ, ಚೇತನ ಮಗದುಮ, ಸೌರಭ ತಳವಾರ, ಲಕ್ಷ್ಮಣ ಪೂಜಾರಿ, ಆಕಾಶ ಜಿರಳೆ ಮತ್ತಿತರರು ಉಪಸ್ಥಿತರಿದ್ದರು.