ಖಾನಾಪುರ: ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ರೂ., ಆಶಾ ಕಾರ್ಯಕರ್ತೆಯರಿಗಾಗಿ 8 ಸಾವಿರ ರೂ. ವೇತನ ಹೆಚ್ಚಳ ಮಾಡಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೊಸ ಯೋಜನೆ ಘೋಷಣೆ ಮಾಡಿದರು.
ಖಾನಾಪುರ ಪಟ್ಟಣದ ಮಲಫ್ರಭ ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಖಾನಾಪುರ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿಯಲ್ಲಿ ಮತ್ತೊಂದು ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ವೇತನ ಹೆಚ್ಚಳ ಮಾಡಲಾಗುತ್ತದೆ. ಬಿಸಿಯೂಟ ಕಾರ್ಯಕರ್ತರಿಗೆ 5 ಸಾವಿರ ರೂ. ವೇತನ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ: ಕರ್ನಾಟಕದಲ್ಲಿ ಸಂಸ್ಕೃತಿ, ಸಂಸ್ಕಾರವು ಎಲ್ಲವೂ ಇದೆ. ಪ್ರಕೃತಿಯ ಎಲ್ಲಾ ವಂಶಗಳು ರಾಜ್ಯದಲ್ಲಿ ಇವೆ. ಇಲ್ಲಿನ ಸರ್ಕಾರ ರಾಜ್ಯದ ಮಹತ್ವ ತಿಳಿದಿಲ್ಲ. ಜನರಿಗಾಗಿ ಕೆಲಸ ಮಾಡುವ ಸರ್ಕಾರ ಇರಬೇಕು. ಅಧಿಕಾರಕ್ಕೆ ಸಿಗುತ್ತಲೇ ನಮಗೆ ಗಳಿಸುತ್ತೇವೆ ಎನ್ನುವ ಭಾವನೆ ಕೆಲವರಿಗೆ ಬರುತ್ತದೆ. ಇಂತಹ ಭಾವನೆ ಇರೋ ಸರ್ಕಾರ ಕಳೆದ ಮೂರು ವರ್ಷ ಹಿಂದೆ ರಚನೆ ಆಗಿದೆ. ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚಿಸಿದೆ ಎಂದರು.
ಮುಖ್ಯಮಂತ್ರಿ ಬದಲಾವಣೆಯಿಂದ ಅಭಿವೃದ್ಧಿ ಕೆಲಸ ಕುಂಠಿತವಾಗಿದೆ. ಪರ್ಸಂಟೆಜ್ ಸರ್ಕಾರ ಎಂದೇ ಇದು ಗುರುತಿಸಿಕೊಂಡಿದೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಬೆಲೆ ಏರಿಕೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ರೈತರ ಎಲ್ಲಾ ವಸ್ತುಗಳ ಮೇಲೆ ಜಿಎಸ್‍ಟಿ, ಟ್ಯಾಕ್ಸ್ ಪರಿಣಾಮ ಬಿದ್ದಿದೆ. ಎಲ್ಲಾ ಹಂತದಲ್ಲಿ ರೈತರು, ಮಹಿಳೆಯರಿಗೆ ಮೋಸ ಆಗಿದೆ. 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದನ್ನು ತುಂಬಿಕೊಳ್ಳುವ ಕೆಲಸ ಸರ್ಕಾರ ಮಾಡಿಲ್ಲ. ನೋಟ್ ಬ್ಯಾನ್, ಜಿಎಸ್‍ಟಿಯಿಂದ ಸಾಕಷ್ಟು ಸಮಸ್ಯೆ ಆಗಿದೆ. ಪಿಎಸ್‍ಐ ನೇಮಕಾತಿಯಲ್ಲಿ ಅವ್ಯವಹಾರ ಆಗಿದೆ. ಶಾಸಕನ ಪುತ್ರರ ಬಳಿ 8 ಕೋಟಿ ಸಿಕ್ಕರೂ ಯಾವುದೇ ಶಿಕ್ಷೆ ಆಗಿಲ್ಲ. ಗುತ್ತಿಗೆದಾರ ಸಂಘದಿಂದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದರೆ ಯಾವುದೇ ಕ್ರಮ ಆಗಿಲ್ಲ. ಐದು ವರ್ಷ ಇದೇ ಸರ್ಕಾರ ಇರಬೇಕೋ ಬದಲಾವಣೆ ಮಾಡಬೇಕು ಎಂದು ನೀವು ನಿರ್ಧಾರ ಮಾಡಬೇಕು ಎಂದು ಹೇಳಿದರು.
ಲೂಟ್, ಜೂಟ್ ಸರ್ಕಾರ ರಾಜ್ಯದಲ್ಲಿ ಇದೆ. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಮಾತು ಆಡುತ್ತಾರೆ. ಕೇಂದ್ರದಲ್ಲಿ ಮೀಸಲಾತಿ ಏರಿಕೆ ಸಾಧ್ಯವಿಲ್ಲ ಎನ್ನುತ್ತಾರೆ. ನ್ಯಾ.ನಾಗಮೋಹನ ದಾಸ್ ವರದಿಯನ್ನು ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಏರಿಕೆ ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ದೊಡ್ಡ ದೊಡ್ಡ ಭರವಸೆ ನೀಡುತ್ತಾರೆ. ಭರವಸೆ ಈಡೇರಿಸುವ ಯಾವುದೇ ಉದ್ದೇಶ ಬಿಜೆಪಿ ಈಡೇರಿಲ್ಲ ಎಮದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ನಿಮ್ಮ ಮತಕ್ಷೇತ್ರದ ಶಾಸಕಿಯಾದ ಅಂಜಲಿ ನಿಂಬಾಳಕರ್ ಅವರು ಬಹಳ ಪ್ರಾಮಾಣಿಕತೆಯಿಂದ ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕಾರಣ ಅವರನ್ನು ಮತ್ತೊಮ್ಮೆ ಶಾಸಕರಾಗಲು ಆಶೀರ್ವದಿಸಬೇಕೆಂದು ಕರೆ ನೀಡಿದರು.
ಶಾಸಕಿ ಅಂಜಲಿ ನಿಂಬಾಳಕರ್ ಮಾತನಾಡಿ, ನಾನು ಶಾಸಕಿಯಾದ ಮೇಲೆ ಖಾನಾಪುರದಲ್ಲಿ 100 ಬೇಡ್ ಗಳ ನೂತನ ಸರ್ಕಾರಿ ಆಸ್ಪತ್ರೆ, ನೂನತ ಬಸ್ ನಿಲ್ದಾಣ ಸೇರಿದಂತೆ ನೀರಾವರಿ ಕೆಲಸಗಳು ಮಾಡಿದ್ದೇನೆ. ಖಾನಾಪುರ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಕಾಂಗ್ರೆಸ್ ಗೆ ಮತ ನೀಡಬೇಕು. ಈಗಾಗಲೇ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರೇಂಟಿಗಳಿಂದ ಜನ ಖುಷಿ ಆಗಿದ್ದಾರೆ. ನಿಮ್ಮ ಕಾಳಜಿ, ಸಮಸ್ಯೆಗೆ ಸ್ಪಂದಿಸಲು ಕಾಂಗ್ರೆಸ್ ಪಕ್ಷ ಹಾಗೂ ನಾನು ಕೂಡ ಸದಾ ಬದ್ಧನಾಗಿರುತ್ತೇನೆ. ಹೀಗಾಗಿ ನನ್ನನ್ನು ಮತ್ತೊಮ್ಮೆ ಆಶೀರ್ವದಿಸಬೇಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಐಸಿಸಿ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ್, ಎಐಸಿಸಿ ವೀಕ್ಷಕ ವಿಶ್ವನಾದನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ಯರು, ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು.