ಬೆಂಗಳೂರು: ಬಿಜೆಪಿಯ ಹಾಲಿ ಅಧ್ಯಕ್ಷ ಬೀದಿಪಾಲಾಗಿದ್ದು, ಹೊಸ ಅಧ್ಯಕ್ಷರ ನೇಮಕ ಆಗುವುದು ಅನುಮಾನವಾಗಿದ್ದು, ರಾಜ್ಯ ಬಿಜೆಪಿ ಅಬ್ಬೇಪಾರಿಯಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.ನಳಿನ್ ಕುಮಾರ್ ಕಟೀಲ್, ಶಾಸಕರಾದ ಮುನಿರತ್ನ, ಗೋಪಾಲಯ್ಯ ಮತ್ತಿತರರು ಜನರ ನಡುವೆ ಮೋದಿ ಅವರಿಗೆ ಸ್ವಾಗತಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರಿ ಟ್ರೋಲ್ ಆಗುತ್ತಿವೆ.
ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಇಂದು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಯಾವುದೇ ಬಿಜೆಪಿ ನಾಯಕರನ್ನು ಹತ್ತಿರಕ್ಕೂ ಸೇರಿಸಿಕೊಳ್ಳದಿರುವುದು ಭಾರೀ ಟ್ರೋಲ್ ಗೆ ಗುರಿಯಾಗಿದೆ.
ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸ್ವಾಗತಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮತ್ತಿತರು ಹೆಚ್ ಎಎಲ್ ಗೇಟ್ ಹೊರಗಡೆ ಜನರ ನಡುವೆ ಕ್ಯೂನಲ್ಲಿ ನಿಂತು ಮೋದಿ ಅವರಿಗೆ ಸ್ವಾಗತ ಕೋರಿದ್ದಾರೆ. ಆದರೆ, ಈ ಸಮಯದಲ್ಲೂ ಮೋದಿ ಅವರ ಬಳಿ ಯಾವುದೇ ರಾಜ್ಯ ನಾಯಕರು ಕಾಣಿಸಿಕೊಳ್ಳಲಿಲ್ಲ. ಬದಲಿಗೆ ರಸ್ತೆಯಲ್ಲಿ ಜನರ ನಡುವೆ ರಾಷ್ಟ್ರಧ್ವಜ ಹಿಡಿದು ಪ್ರಧಾನಿಗೆ ಸ್ವಾಗತ ಕೋರಿದ್ದಾರೆ.
ರಾಜ್ಯ ಬಿಜೆಪಿ ದಂಡ ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ. ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಎಂದು ಟ್ವಿಟಿಗರು ಟ್ರೋಲ್ ಮಾಡುತ್ತಿದ್ದಾರೆ.