ಬೆಂಗಳೂರು: ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟಿಸಿ ರಾಜಕೀಯ ಲಾಭ ಪಡೆಯುವ ದುಷ್ಟತನವನ್ನು ಕೈಬಿಟ್ಟು ನಿಮ್ಮ ಹತ್ತು ವರ್ಷಗಳ ಸಾಧನೆಯ ಬಗ್ಗೆ ಮಾತನಾಡಿ ,ಸನ್ಮಾನ್ಯ ನರೇಂದ್ರ ಮೋದಿ ಅವರೇ, ಈ ಚುನಾವಣೆಯ ನಿಮ್ಮ ಭಾಷಣಗಳು ಪ್ರಧಾನಿಯಾಗಿ ನಿಮ್ಮ ಕೊನೆಯ ಭಾಷಣವಾಗಿರಬಹುದು. ಮತ್ತೆ ನೀವು ಖಂಡಿತಾ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟಿಸಿ ರಾಜಕೀಯ ಲಾಭ ಪಡೆಯುವ ದುಷ್ಟತನವನ್ನು ಕೈಬಿಟ್ಟು ನಿಮ್ಮ ಹತ್ತು ವರ್ಷಗಳ ಸಾಧನೆಯ ಬಗ್ಗೆ ಮಾತನಾಡಿ, ನೀವು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡಿರುವ ಅನ್ಯಾಯ ಮತ್ತು ನಿಮ್ಮ ನಡೆ-ನುಡಿಗಳಲ್ಲಿನ ಹಿಪಾಕ್ರಸಿ ಬಗ್ಗೆ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ, ಮಾತುಮಾತಿಗೆ ಕರ್ನಾಟಕಕ್ಕೆ ಯುಪಿಎ ಸರ್ಕಾರ ಕೊಟ್ಟಿದ್ದು ಕಡಿಮೆ, ಎನ್ ಡಿ ಎ ಸರ್ಕಾರ ಎಷ್ಟೊಂದು ಕೊಟ್ಟಿದೆ ಎಂದು ಲೆಕ್ಕ ಹೇಳುತ್ತಿರಲ್ಲಾ? ನಮ್ಮ ಲೆಕ್ಕವನ್ನೂ ಕೇಳಿ. 2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ ರೂ. 24,42,213 ಕೋಟಿ, ಕರ್ನಾಟಕಕ್ಕೆ ನೀಡಿದ್ದ ತೆರಿಗೆ ಪಾಲು ರೂ.35,895 ಕೋಟಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಯ ಪಾಲು ರೂ. 16,082 ಕೋಟಿ. ಹೀಗೆ ಒಟ್ಟು ರೂ.46,288 ಕೋಟಿ ರಾಜ್ಯಕ್ಕೆ ಬಂದಿತ್ತು.
2023-24ನೇ ಸಾಲಿನ ಕೇಂದ್ರ ಬಜೆಟ್ ಗಾತ್ರ ರೂ.45,03,097 ಕೋಟಿ. ಆದರೆ ನಿಮ್ಮ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಹಂಚಿಕೆ, ಕೇಂದ್ರ ಪುರಸ್ಕೃತ ಯೋಜನೆಯ ಪಾಲು ಸೇರಿ ನೀಡಿದ್ದು ಕೇವಲ ರೂ.55,529 ಕೋಟಿ. ಐದು ವರ್ಷಗಳಲ್ಲಿ ಬಜೆಟ್ ಗಾತ್ರ ಹೆಚ್ಚು ಕಡಿಮೆ ದುಪ್ಪಟ್ಟಾದರೂ ಕರ್ನಾಟಕಕ್ಕೆ ನೀಡುವ ಹಣವೂ ದುಪ್ಪಟ್ಟಾಗಬೇಕಿತ್ತು ಅಲ್ಲವೇ? ಅಂದರೆ ಕನಿಷ್ಠ ಒಂದು ಲಕ್ಷ ಕೋಟಿಯನ್ನಾದರೂ ನೀವು ನೀಡಬೇಕಾಗಿತ್ತಲ್ಲವೇ? ಈ ಲೆಕ್ಕ ಸುಳ್ಳೇ? ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 95,21,493 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ರೂಪಿಸಿ ಖರ್ಚು ಮಾಡಿತ್ತು. ನಿಮ್ಮ ನೇತೃತ್ವದ ಎನ್ ಡಿಎ ಸರ್ಕಾರ ಹತ್ತು ವರ್ಷಗಳ ಅವಧಿಯಲ್ಲಿ ಒಟ್ಟು 282 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ರೂಇಸಿ ಖರ್ಚು ಮಾಡಿದೆ. ಅಂದರೆ ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚು. ಇದು ಸುಳ್ಳೇ? ಬಜೆಟ್ ಗಾತ್ರ ಮೂರು ಪಟ್ಟು ಹೆಚ್ಚಾದಾಗ ಸಾಧನೆಯೂ ಮೂರು ಪಟ್ಟು ಹೆಚ್ಚಾಗಬೇಕಿತ್ತಲ್ಲವೇ? ಎಲ್ಲಿದೆ ನಿಮ್ಮ ಸಾಧನೆ? ಎಂದು ಪ್ರಶ್ನಸಿದ್ದಾರೆ.ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ ಬಿಜಲಿ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಸುತ್ತೇವೆ ಎನ್ನುವುದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ.