ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ‘2ಡಿ’ಗೆ ಸೇರಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಪ್ರತಿಯನ್ನು ಕಾಂಗ್ರೆಸ್ ಮುಖಂಡರು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ನೀಡಿರುವ ಮೀಸಲಾತಿ ಗೆಜೆಟ್ ಪತ್ರಕ್ಕೆ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಮುಖಂಡರಾದ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಸರ್ಕಾರ ನೀಡಿರುವ ಮೀಸಲಾತಿಯನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನಂತರ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಅವರು, ಲಿಂಗಾಯತ ಸಮುದಾಯಕ್ಕೆ ಸರ್ಕಾರ ಅನ್ಯಾಯ ಮಾಡಿದ್ದು, ಮೀಸಲಾತಿಯಲ್ಲಿ ಚುನಾವಣೆ ಗಿಮಿಕ್ ಇದೆ. ಎಂದು ಆರೋಪಿಸಿದರು. ಕೆಲವರು ಶ್ರೀಗಳಿಗೆ ನಾನು ಜೋರು ಮಾಡಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಶ್ರೀಗಳ ಮುಂದೆ ಅಸಭ್ಯವಾಗಿ ವರ್ತನೆ ಮಾಡಿಲ್ಲ, ಕೆಲವರು ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ, ನಾನು ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡೆಯನ್ನು ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ಇವರು ಹಿಂದುಳಿದ ಆಯೋಗದ ಮಧ್ಯಂತರ ವರದಿಯಿಂದ ಮೀಸಲಾತಿ ನೀಡಿದ್ದಾರೆ. ಮಧ್ಯಂತರ ವರದಿಯಿಂದ ಮೀಸಲಾತಿ ಕೊಡುವುದಕ್ಕೆ ಬರುವುದಿಲ್ಲ, ಕಾನೂನಿನಲ್ಲಿ ಆ ಅವಕಾಶವಿಲ್ಲ ಆದರೆ, ಇವರು ಮೀಸಲಾತಿ ನೀಡಿದ್ದಾರೆ. ಇದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದರು. ಮೀಸಲಾತಿ ವಿಚಾರದಲ್ಲಿ ನಮ್ಮ ಶ್ರೀಗಳಿಗೆ ಒತ್ತಾಯ ಮಾಡಿ ಪ್ರತಿಭಟನೆ ಕೈಬಿಡುವಂತೆ ಮಾಡಿದ್ದಾರೆ, ಯಾರು ಎಂಬುದು ಮುಂದೊಂದು ದಿನ ಹೇಳುತ್ತೇನೆ ಎಂದರು.