ಮೈಸೂರು: ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ರಂಗೇರಿದ್ದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ನಂತರ ಪಕ್ಷಗಳು ಮತಕ್ಕಾಗಿ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಭಾರಿ ಕುತೂಹಲ ಹುಟ್ಟಿಸಿರುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಂತೂ ಅಭ್ಯರ್ಥಿ ಪರ ಪಕ್ಷದ ಘಟಾನುಘಟಿಗಳೇ ಖುದ್ದಾಗಿ ಫೀಲ್ಡ್ಗಿಳಿದು ಜನರ ಬೆಂಬಲಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ವರುಣಾದಲ್ಲಿ ಮಾಸ್ ಲೀಡರ್ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾದರೇ, ಇವರಿಗೆ ಟೈಟ್ ಫೈಟ್ ನೀಡಲು ಬಿಜೆಪಿಯಿಂದ ಸಿದ್ದರಾಮಯ್ಯ ವಿರುದ್ಧ ಸಚಿವ ಸೋಮಣ್ಣ ಅವರನ್ನು ನಿಲ್ಲಿಸಲಾಗಿದೆ.
ಇನ್ನು ಸೋಮಣ್ಣ ಪರ ವರುಣಾದಲ್ಲಿ ಸಂಸದ ಪ್ರತಾಪ್ ಸಿಂಹ ಪ್ರಚಾರಕ್ಕೆ ಇಳಿದಿದ್ದು, ಈ ವೇಳೆ, ವರುಣಾ ಕ್ಷೇತ್ರದ ಜನರು ಸಂಸದರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಪ್ರಶ್ನೆಯಿಂದ ಶುರುವಾದ ಜನರ ಮಾತು ಕೊನೆ ಕೊನೆಗೆ ಮಾತಿನ ಚಕಮಕಿ ಮಟ್ಟಕ್ಕೆ ಹೋಯಿತು. ಇದರಿಂದ ಸಂಸದ ಪ್ರತಾಪ್ ಸಿಂಹ ಸಮಜಾಯಿಷಿ ಕೊಡುವ ಪ್ರಯತ್ನ ಕೂಡಾ ಮಾಡಿದರು.
ವರುಣಾಕ್ಕೆ ಮತ ಕೇಳಲು ಹೋದ ಸಂಸದ ಪತ್ರಾಪ್ ಸಿಂಹ ಅವರಲ್ಲಿ ಗ್ರಾಮಸ್ಥರು ಬಿಜೆಪಿ ಸರ್ಕಾರದ ಹೇಳಿಕೆಗಳ ಕುರಿತು ತಮ್ಮ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದ್ದಾರೆ. ಸಂದಸರನ್ನು ಮಾತನಾಡಲು ಬಿಡದೇ ಪ್ರಶ್ನೆಗಳನ್ನ ಕೇಳಿದರು. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನೇ ಬದಲು ಮಾಡುತ್ತೇವೆ ಅಂತೀರಾ?, ನಾವು ಬಂದಿದ್ದೇ ಸಂವಿಧಾನದ ಬದಲಾವಣೆ ಮಾಡುವುದಕ್ಕೆ ಎಂದು ಬಿಜೆಪಿ ಪಕ್ಷದವರು ಹೇಳಿದ್ದೀರಿ, ನಾವು ಯಾಕೆ ನಿಮಗೆ ಬೆಂಬಲ ನೀಡಬೇಕು ಎಂದರು.
ಮುಂದುವರೆದು, ಅಕ್ಕಿ ನಮ್ಮದು ಚೀಲ ಮಾತ್ರ ಸಿದ್ದರಾಮಯ್ಯ ಅವರದ್ದು ಎನ್ನುತ್ತೀರಾ?, ಈಗ ಯಾಕೆ ಅಕ್ಕಿ ಕಡಿಮೆ ಕೊಡುತ್ತಿದ್ದೀರಾ?, ಮೈಸೂರಿಗೆ ಸಿದ್ದರಾಮಯ್ಯ ಅವರ ಕೊಡಗೆ ಏನು ಅಂತೀರಾ?, ಸಿದ್ದರಾಮಯ್ಯ ಅವರ ಹತ್ತಿರ ಕುಳಿತುಕೊಳ್ಳಿ ಗೊತ್ತಾಗುತ್ತೆ ಎಂದು ಕಿಡಿಕಾರಿದರು. ಅಲ್ಲದೇ ಸಂಸದ ಶ್ರೀನಿವಾಸ್ ಪ್ರಸಾದ್ ಇದುವರೆಗೂ ಕ್ಷೇತ್ರಕ್ಕೆ ಬಂದೇ ಇಲ್ಲ. ನೀವು ಮಹದೇವಪ್ಪ ಅವರ ವಿರುದ್ಧ ಮಾತನಾಡುತ್ತೀರಾ, ರಸ್ತೆಗಳ ರಾಜ ಎನ್ನತ್ತೀರಾ, ಬರೀ ಸುಳ್ಳುಗಳನ್ನೇ ಹೇಳುವ ನಿಮ್ಮ ಕೊಡುಗೇ ಏನಿದೆ ಎಂದು ವರುಣಾದ ಜನರು ಸಂಸದ ಪ್ರತಾಪ್ ಸಿಂಹರವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದರು.