ಬೆಳಗಾವಿ : ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡುವ ಮೂಲಕ ನೈತಿಕ ಪೊಲೀಸ್ ಗಿರಿ ಮೆರೆದಿರುವ ಘಟನೆ ನಗರದ ಖಡಕ್ ಗಲ್ಲಿಯಲ್ಲಿ ಶುಕ್ರವಾರ ಜರುಗಿದ್ದು, ಈ ಕುರಿತು ನಾಲ್ಕಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋಕಾಕ ತಾಲೂಕಿನ ಪಟ್ಟಣದ ಯುವಕ ಹಾಗೂ ಅನ್ಯ ಕೋಮಿನ ಯುವತಿ ಹುಟ್ಟಿನಿಂದಲೇ ಸ್ನೇಹಿತರಾಗಿ ಬೆಳೆದಿದ್ದಾರೆ. ಕಾರ್ಯದ ನಿಮಿತ್ತ ಇಬ್ಬರೂ ಬೆಳಗಾವಿ ನಗರಕ್ಕೆ ಆಗಮಿಸಿದ ವೇಳೆ ಇಬ್ಬರು ಜತೆಯಾಗಿ ಹೋಗುವುದನ್ನು ನೋಡಿದ ಅನ್ಯಕೋಮಿನ ಯುವಕರು ಜಮಾಯಿಸಿದ್ದಾರೆ. ಈ ವೇಳೆ ಯುವಕ ಮತ್ತು ಯುವತಿಯನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಈ ಸಮಯದಲ್ಲಿ ಯುವಕ ನಾವಿಬ್ಬರೂ ಹುಟ್ಟಿನಿಂದಲೂ ಸ್ನೇಹಿತರಾಗಿದ್ದು, ಕಾರ್ಯದ ನಿಮಿತ್ತ ಬೆಳಗಾವಿ ನಗರಕ್ಕೆ ಬಂದಿರುವುದಾಗಿ ತಿಳಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಅನ್ಯಕೋಮಿನ ಯುವಕರು ಯುವತಿಯನ್ನು ವಿಚಾರಿಸಿದ್ದಾರೆ. ಅಷ್ಟರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಯುವಕರನ್ನು ಕಂಡು ಯುವತಿ ಗಾಬರಿಯಾಗಿ, ಈತ ನನ್ನ ಸ್ನೇಹಿತ ಅಲ್ಲ ಮತ್ತು ಈತನಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾಳೆ. ಇದರಿಂದ ಅಸಮಾಧಾನಗೊಂಡ ಅನ್ಯಕೋಮಿನ ಯುವಕರು, ನಮ್ಮ ಸಮುದಾಯದ ಯುವತಿಯನ್ನು ಕರೆದುಕೊಂಡು ಓಡಾಡುತ್ತಿದ್ದಾಯಾ ಎಂದು ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ತಕ್ಷಣ ಸ್ಥಳೀಯರು ಜಮಾಯಿಸಿ ಹಲ್ಲೆ ಮಾಡುವುದನ್ನು ತಡೆಯಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಪ್ರಾಪ್ತರು ಸೇರಿದಂತೆ ನಾಲ್ಕು ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ಮಾರ್ಕೇಟ್ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಗರದಲ್ಲಿ ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ.