ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ‘ನೀಟ್’ ಪರೀಕ್ಷೆಯ ದಿನದಂದೇ (ಮೇ 7) ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ರೋಡ್ ಶೋ ನಡೆಸುತ್ತಿರುವುದು ಖಂಡನೀಯ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರ ಸಂಘದಿಂದ ಶನಿವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಧೋರಣೆ ಹಾಗೂ ಈ ವಿಷಯದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ. ಬೆಂಗಳೂರೊಂದರಲ್ಲೇ 50ಸಾವಿರ ಹಾಗೂ ರಾಜ್ಯದಾದ್ಯಂತ ಒಂದು ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮೋದಿ ರೋಡ್ ಶೋಗಾಗಿ ಅನಗತ್ಯವಾಗಿ ಕೆಲವು ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ’ ಎಂದು ದೂರಿದರು.
‘ಮೋದಿ ಪ್ರಚಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಆಗುವ ತೊಂದರೆಗಳಿಗೆ ಯಾರು ಹೊಣೆ? ಗ್ರಾಮೀಣ ಪ್ರದೇಶದ ಬಹಳಷ್ಟು ಮಂದಿ ಹಾಜರಾಗಲು ಸಾಧ್ಯವಾಗುದಿಲ್ಲ. ಒಂದು ದಿನ ಮುಂಚಿತವಾಗಿ ಬಂದು ಉಳಿದುಕೊಳ್ಳಿ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಸಚಿವೆ ಶೋಭಾ ಕರಂದ್ಲಾಜೆ ನೀಡಿದ್ದಾರೆ.
ಇದು ಅತ್ಯಂತ ಖಂಡನೀಯ. ಮುಂಚಿತವಾಗಿ ಹೋಗಿ ಉಳಿದುಕೊಳ್ಳಲಾದೀತೇ? ಇದನ್ನು ಒಪ್ಪಲಾಗುವುದೇ? ಇವರು ಹೇಳಿದಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬೇಕಾ? ಇದು ಅತಿಯಾಯಿತು’ ಎಂದು ವಾಗ್ದಾಳಿ ನಡೆಸಿದರು. ‘ಸರ್ಕಾರವು ವಿದ್ಯಾರ್ಥಿಗಳಿಗೆ ತೊಂದರೆ ಕೊಡುವ ಯಾವ ಕೆಲಸವನ್ನೂ ಮಾಡಬಾರದು’ ಎಂದು ಹೇಳಿದರು.