ಬೆಳಗಾವಿ: ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ನಡೆದ ಕೋವಿಡ್ ಹಗರಣ ಕುರಿತು ತನಿಖೆ ಮಾಡಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರವಿದ್ದಾಗ ಪ್ರಮುಖ ಹಗರಣಗಳಾದ ಶೇ 40ರಷ್ಟು ಕಮಿಷನ್, ಕೊರೊನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ ಹಗರಣದ ಬಗ್ಗೆ ನಮ್ಮ ಸರ್ಕಾರ ಸೂಕ್ತ ತನಿಖೆ ನಡೆಸಲಿದೆ. ಮುಖ್ಯವಾಗಿ ಕೋವಿಡ್ ಹಗರಣ ತನಿಖೆ ಮಾಡುವಂತೆ ಮೊದಲು ನಾವೇ ಡಿಮ್ಯಾಂಡ್ ಮಾಡಿದ್ದೆವು, ಸಧ್ಯ ನಮ್ಮ ಸರ್ಕಾರ ವತಿಯಿಂದ ಈ ಪ್ರಕರಣ ಕುರಿತು ಸೂಕ್ತ ತನಿಖೆ ಮಾಡಲಾಗುವುದು ಎಂದು ಹೇಳಿದರು.
ಹಿಂದಿನ ಸರ್ಕಾರದ ವೈದ್ಯಕೀಯ ಸಚಿವ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಬರುವುದು ಬಿಡುವುದು ಎರಡನೇ ಮಾತು. ಆದರೆ ಕೋವಿಡ್ ಹಗರಣ ಕುರಿತು ತನಿಖೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಮಾಜಿ ವೈದ್ಯಕೀಯ ಸಚಿವರು ಕೂಡಾ ತನಿಖೆ ಮಾಡಿಸುತ್ತೆವೇ ಎಂದು ಹೇಳುತ್ತಿದ್ದಾರೆ. ಇದು ಹಾಸ್ಯಾಸ್ಪದ, ಅವರು ಈಗ ಮಾಜಿಯಾಗಿದ್ದು ಅವರಿಗೆ ಮಾಡಲು ಕೆಲಸವಿಲ್ಲ, ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇದೆ. ಕೋವಿಡ್ ಹಗರಣ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನೂ ಪ್ರಿಯಾಂಕಾ ಜಾರಕಿಹೊಳಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಿರ್ಧಾರ ಮಾಡಿಲ್ಲ ನಮ್ಮಲ್ಲಿ ತುಂಬಾನೆ ಆಕಾಂಕ್ಷಿಗಳು ಇದ್ದಾರೆ , ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ನಡುವೆ ಯಾವದೇ ಮನಸ್ತಾಪವಿಲ್ಲ ನಾವೋ ಎಲ್ಲರೂ ಒಂದೇ ಎಂದು ಹೇಳಿದ್ದರು.
ನೈತಿಕ ಪೊಲೀಸಗಿರಿಗೆ ಕ್ರಮ: ಕಳೆದ ದಿನಗಳಿಂದ ಬೆಳಗಾವಿಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇಂತಹ ಘಟನೆಗಳು ಜಿಲ್ಲೆ ಅಷ್ಟೇ ಅಲ್ಲ ರಾಜ್ಯದಲ್ಲೂ ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು.